ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ, ನಾಳೆಯೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ : ಸಿಎಂ.

60
firstsuddi

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು, ನಾಳೆಯೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಸರ್ವ ಪಕ್ಷ ಸಭೆ ಬಳಿಕ ಮಾತನಾಡಿದ ಸಿಎಂ, ನ್ಯಾ. ನಾಗಮೋಹನ್ ದಾಸ್ ವರದಿ ಬಗ್ಗೆ ಚರ್ಚೆ ಮಾಡಿದ್ದೇವೆ. ಎಸ್ ಸಿ 15 ರಿಂದ 17 ಕ್ಕೆ ಹೆಚ್ಚಳ, ಎಸ್ ಟಿ 3 ರಿಂದ 7 ಕ್ಕೆ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಾಳೆನೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ ಮಾಡುತ್ತೇವೆ. ಈಗಿರುವ ಯಾವುದೇ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡುವುದಿಲ್ಲ ಎಂದು ಮಾಹಿತಿ ನೀಡಿದರು.

ನಾಗಮೋಹನ್ ದಾಸ್ ವರದಿಯಂತೆ ಶೇ.50ಕ್ಕೂ ಮೇಲೆ ಮೀಸಲಾತಿ ಕೊಡುತ್ತೇವೆ. EWS ಕೋಟಾ ಈಗಾಗಲೇ ಇದೆ. ಅದು ಸುಪ್ರೀಂಕೋರ್ಟ್ ನಲ್ಲಿ ಇದೆ. ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಸಮುದಾಯದ ಒಳಗೆ ಇರುವವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ ಎಂಬ ಕೂಗು ಇದೆ. ಅದಕ್ಕೂ ಕೂಡ ಎಲ್ಲರ ಜೊತೆ ಚರ್ಚೆ ಮಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡದೆ ಅಂತಿಮ ತೀರ್ಮಾನ ಮಾಡ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.