ಮದ್ಯ ಕುಡಿಯುವ ಚಾಲೆಂಜ್- ಮಿತಿ ಮೀರಿ ಕುಡಿದು ಓರ್ವ ವ್ಯಕ್ತಿ ಸಾವು…

72
firstsuddi

ಹಾಸನ: ಇಬ್ಬರು ವ್ಯಕ್ತಿಗಳ ನಡುವೆ ಮದ್ಯ ಕುಡಿಯುವ ಸ್ಪರ್ಧೆ ನಡೆದು ಮಿತಿ ಮೀರಿ ಕುಡಿದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಜಿಲ್ಲೆಯ ಹೊಳೆನರಸೀಪುರದ ಸಿಗರನಹಳ್ಳಿಯಲ್ಲಿ ನಡೆದಿದೆ.

ಒಂದೇ ಗ್ರಾಮದ ಇಬ್ಬರು ವ್ಯಕ್ತಿಗಳ ನಡುವೆ ಅರ್ಧ ಗಂಟೆಯಲ್ಲಿ 90 ಎಂಎಲ್‍ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಸ್ಪರ್ಧೆ ಏರ್ಪಟ್ಟಿದೆ. ಸ್ಪರ್ಧೆಯಲ್ಲಿ ಹೆಚ್ಚು ಮದ್ಯ ಸೇವನೆ ಮಾಡಿದ ತಿಮ್ಮೇಗೌಡ (60) ಎಂಬಾತ ಸಾವಿಗೀಡಾಗಿದ್ದಾನೆ. ಮೃತ ತಿಮ್ಮೇಗೌಡ ಹಾಗೂ ದೇವರಾಜ ಎಂಬಾತನ ನಡುವೆ ಈ ಸ್ಪರ್ಧೆ ಏರ್ಪಟ್ಟಿತ್ತು. ಈ ಇಬ್ಬರಿಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‍ಗಳನ್ನು ನೀಡಿದ್ದ ಎನ್ನಲಾಗಿದೆ.

ಸ್ಪರ್ಧೆ ಗೆಲ್ಲಲು ಮದ್ಯ ಕುಡಿದು, ರಕ್ತ ವಾಂತಿ ಮಾಡಿಕೊಂಡು ತಿಮ್ಮೇಗೌಡ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ತಿಮ್ಮೇಗೌಡ ಅಸ್ವಸ್ಥ ಆಗುತ್ತಲೇ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಹಬ್ಬಕ್ಕಾಗಿ ತಿಮ್ಮೇಗೌಡನ ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು. ಈ ಮಧ್ಯೆ ಕುಡಿದು ಸುಸ್ತಾಗಿ ಬಿದ್ದಿದ್ದ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆತಂದು ಬಿಟ್ಟಿದ್ದರು. ಈ ವೇಳೆ ಆತ ಸಾವಿಗೀಡಾಗಿದ್ದಾನೆ.

ಘಟನೆ ಬಗ್ಗೆ ತಿಮ್ಮೇಗೌಡನ ಪುತ್ರಿ, ದೇವರಾಜು ಹಾಗೂ ಕೃಷ್ಣೇಗೌಡನ ವಿರುದ್ಧ ದೂರು ದಾಖಲಿಸಿದ್ದಾಳೆ. ಅಲ್ಲದೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.