ನವದೆಹಲಿ : ಹಿರಿಯ ವಕೀಲೆ ಎಲ್.ವಿಕ್ಟೋರಿಯಾ ಗೌರಿ ಅವರು ಮದ್ರಾಸ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಪ್ರಮಾಣ ವಚನ ಬೋಧಿಸಿದರು.
ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಮೂರ್ತಿಗಳನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ಬೆಳಗ್ಗೆ 10.25ರ ಸುಮಾರಿಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಗೌರಿ ವಿರುದ್ಧದ ಆರೋಪವನ್ನು ಕೈಬಿಟ್ಟು, ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾ ಮಾಡಿತು. ಸುಪ್ರೀಂ ಆದೇಶ ಬಂದ 5 ನಿಮಿಷಗಳ ಬಳಿಕ ಮದ್ರಾಸ್ ಹೈಕೋರ್ಟ್‍ನಲ್ಲಿ ಸರಿಯಾಗಿ 10.30ಕ್ಕೆ ವಿಕ್ಟೋರಿಯಾ ಗೌರಿ ಅವರು, ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗೌರಿ ಅವರ ನೇಮಕದ ವಿರುದ್ಧ ಮದ್ರಾಸ್ ಹೈಕೋರ್ಟ್ ನಿಂದ ವಕೀಲರು ಅರ್ಜಿ ಸಲ್ಲಿಸಿದ್ದರು. ಅವರು ಬಿಜೆಪಿ ಸದಸ್ಯರಾಗಿದ್ದಾರೆ, ವಕೀಲೆಯಾಗಿ ಬಿಜೆಪಿಯ ಪರ ಕೆಲಸವೂ ಮಾಡಿದ್ದಾರೆ. ಸಮುದಾಯವೊಂದರ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿರುವ ಹಿನ್ನೆಲೆ ಅವರ ನೇಮಕವನ್ನು ತಡೆ ಹಿಡಿಯಬೇಕು ಎಂದು ಮನವಿ ಮಾಡಲಾಗಿತ್ತು.










