ಭಾರತವನ್ನು ವಿಶ್ವದ ಮಧುಮೇಹಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಭಾರತದಲ್ಲಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಇದ್ದಾರೆ. 2023ರ ಜೂನ್ ತಿಂಗಳ ಅಂಕಿ ಅಂಶದ ಪ್ರಕಾರ ಭಾರತದಲ್ಲಿ 101 ಮಿಲಿಯನ್ಗೂ ಅಧಿಕ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಆತಂಕಾರಿ ಅಂಕಿ ಅಂಶಗಳನ್ನು ಗಮನಿಸಿದರೆ ನಾವು ಮಧುಮೇಹದಿಂದ ಪಾರಾಗಲು ಏನಾದರೊಂದು ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಿದೆ. ನಮ್ಮ ಜೀವನಶೈಲಿ, ಆಹಾರ ಕ್ರಮಗಳು ಮಧುಮೇಹದ ಮೇಲೆ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಧಾನ್ಯಗಳು, ಹಸಿರು ಸೊಪ್ಪುಗಳು, ತರಕಾರಿಗಳನ್ನು ಹೆಚ್ಚಾಗಿ ಬಳಸುವ ಮೂಲಕ ಮಧುಮೇಹದಿಂದ ರಕ್ಷನೆ ಪಡೆಯಲು ಸಾಧ್ಯವಿದೆ. ಜೊತೆಯಲ್ಲಿ ಬಾದಾಮಿ ಸೇವನೆ ಕೂಡ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ
ಬಾದಾಮಿಯಲ್ಲಿ ಪ್ರೊಟೀನ್, ಫೈಬರ್, ಆರೋಗ್ಯಕರ ಕೊಬ್ಬು, ಸತು , ಮೆಗ್ನಿಷಿಯಂ ಹಾಗೂ ಪೊಟ್ಯಾಷಿಯಂ ಸೇರಿದಂತೆ ಒಟ್ಟೂ 15 ಬಗೆಯ ಅಗತ್ಯ ಪೋಷಕಾಂಶಗಳು ಅಡಗಿದೆ. ಅಲ್ಲದೇ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮಥ್ರ್ಯ ಕೂಡ ಬಾದಾಮಿಗಿದೆ. ಪ್ರತಿನಿತ್ಯ ಬಾದಾಮಿ ಸೇವನೆ ಮಾಡುವುದರಿಂದ ಕಾರ್ಬೋಹೈಡ್ರೇಟ್‍ಯುಕ್ತ ಆಹಾರಗಳ ಸೇವನೆಯಿಂದ ದೇಹದಲ್ಲಿ ಹೆಚ್ಚುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ಬರುತ್ತದೆ. ಟೈಪ್ 2 ಡಯಾಬಿಟೀಸ್ ಹೊಂದಿರುವವರು ನಿತ್ಯ 30 ಗ್ರಾಂ ಬಾದಾಮಿ ಸೇವನೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. ಹೀಗಾಗಿ ಎಲ್ಲಿಯಾದರೂ ಪ್ರಯಾಣ ಮಾಡುವಾಗ ನಿಮ್ಮೊಂದಿಗೆ ಬಾದಾಮಿಗಳನ್ನು ಇಟ್ಟುಕೊಳ್ಳಿ. ಮಾರ್ಗಮಧ್ಯದಲ್ಲಿ ಅನಾರೋಗ್ಯಕರ ತಿಂಡಿಗಳನ್ನು ಸೇವನೆ ಮಾಡಿ ಆರೋಗ್ಯ ಹದಗೆಡಿಸಿಕೊಳ್ಳುವ ಬದಲು ಬಾದಾಮಿ ಸೇವನೆ ಮಾಡಿ.
ಧಾನ್ಯಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ರಕ್ತದಲ್ಲಿ ಹಠಾತ್ ಗ್ಲುಕೋಸ್ ಪ್ರಮಾಣದ ಏರಿಕೆಯನ್ನು ನಿಯಂತ್ರಿಸುತ್ತದೆ.
ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಸಾಮಥ್ರ್ಯ ಇವುಗಳಿಗೆ ಇರುತ್ತದೆ. ಅಲ್ಲದೇ ಧಾನ್ಯಗಳಲ್ಲಿ ಮೆಗ್ನಿಷಿಯಂ, ವಿಟಮಿನ್ ಬಿ ಸೇರಿದಂತೆ ಅಗಾಧ ಪ್ರಮಾಣದಲ್ಲಿ ಪೋಷಕಾಂಶಗಳುಅಡಗಿ ಇರುತ್ತದೆ. ಇದು ಒಟ್ಟಾರೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಮೆಂತೆ ಬೀಜಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ವಿಶೇಷ ಸಾಮಥ್ರ್ಯವನ್ನು ಹೊಂದಿರುತ್ತವೆ. ಮೆಂತೆಯಲ್ಲಿ ಕರಗುವ ಫೈಬರ್ ಸಮೃದ್ಧವಾಗಿದೆ. ಇವುಗಳು ಕಾರ್ಬೋಹೈಡ್ರೇಟ್‍ಗಳ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ.
ಇವುಗಳು ರಕ್ತದಲ್ಲಿ ಸ್ಥಿರವಾದ ಸಕ್ಕರೆಮಟ್ಟವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತೆಯನ್ನು ಹಾಕಿ ನೆನೆಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.
ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡಂಟ್ ಗುಣಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ನೆಲ್ಲಿಕಾಯಿಯು ಒಟ್ಟಾರೆ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತದೆ. ಇದು ಮೇಧೋಜೀರಕ ಗ್ರಂಥಿಯ ಕಾರ್ಯವನ್ನು ವರ್ಧಿಸುತ್ತದೆ.
ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ನೆಲ್ಲಿಕಾಯಿಯನ್ನು ದಿನನಿತ್ಯ ಸೇವನೆ ಮಾಡಿ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ನೆಲ್ಲಿಕಾಯಿ ರಸ ಸೇವನೆ ಮಾಡಿ ಅಥವಾ ಇಡೀ ನೆಲ್ಲಿಕಾಯಿ ಯನ್ನು ತಿನ್ನಿ. ಇದರಿಂದ ರಕ್ತದಲ್ಲಿನ ಸಕ್ಕರೆ ನಿರ್ವಹಣೆ ಗಮನಾರ್ಹವಾಗಿ ನಿಯಂತ್ರಣಕ್ಕೆ ಬರುತ್ತದೆ.

ಹಾಗಲಕಾಯಿ ಸೇವನೆಯಿಂದ ಸಕ್ಕರೆ ಅಂಶ ನಿಯಂತ್ರಣ
ಅದರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಮಾತಿದೆ. ಇದು ಹಾಗಲಕಾಯಿ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ನಾವು ಸೇವಿಸಬಹುದಾದ ಪರಿಣಾಮಕಾರಿ ಆಹಾರವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಹಾಗಲಕಾಯಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದಾಗಿದೆ.
ಮನೆಯಲ್ಲಿಯೇ ಸಕ್ಕರೆಯ ಏರಿಳಿತಗಳನ್ನು ನಿಯಂತ್ರಿಸಲು ಇಚ್ಛಿಸಿದ್ದರೆ ನೀವು ಈ ಎಲ್ಲಾ ನೈಸರ್ಗಿಕವಾದ ವಿಧಾನಗಳನ್ನು ಬಳಕೆ ಮಾಡುವುದು ಉತ್ತಮ. ಈ ಆಹಾರಗಳು ಖಂಡಿತ ನಿಮ್ಮ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಆದರೆ ವೈದ್ಯರೊಂದಿಗೆ ನಿಯಮಿತದಿಂದ ಸಂಪರ್ಕದಲ್ಲಿರುವುದು ಕೂಡ ಮುಖ್ಯವಾಗಿರುತ್ತದೆ. ಈ ನೈಸರ್ಗಿಕ ತರಕಾರಿಗಳ ಜೊತೆಯಲ್ಲಿ ವೈದ್ಯರ ಸಲಹೆಯಂತೆ ಔಷಧಿಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.










