ಡಾ. ಎಂ.ಎಸ್. ಮಣಿ

`ಕೊರೋನಾ’ ಕಂಟಕದ ಜೀವಭಯದ ಮಧ್ಯೆ ಮೇ 1ರ ಕಾರ್ಮಿಕರ ದಿನಾಚರಣೆ ಅತ್ಯಂತ ನಿರಸವಾಗಿ ಸಾಗಿ ಹೋಗಿದೆ. 40 ಕೋಟಿಗೂ ಅಧಿಕ ಕಾರ್ಮಿಕರನ್ನು ಹೊಂದಿರುವ ದೇಶ ನಮ್ಮದಾಗಿದೆ. ಹೀಗಾಗಿ ಕಾರ್ಮಿಕರ ಬದುಕಿನ ಮೇಲೆ ಬೆಳಕು ಚೆಲ್ಲಬೇಕಾದ ದಿನ, ಗ್ರಹಣಕ್ಕೊಳಗಾದಂತೆ ಹಾದು ಹೋಗಿದ್ದು ನಿಜಕ್ಕೂ ಕಳವಳವನ್ನು ಮೂಡಿಸಿದೆ. ಬಹುಸಂಖ್ಯಾತ ಜನರ ಸಮಸ್ಯೆ, ಸವಾಲುಗಳ ಬಗ್ಗೆ ಚರ್ಚೆ ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಕಳೆದೆರಡು ದಶಕಗಳ ಹಿಂದೆ ಇದ್ದಂತಹ ಕಾರ್ಮಿಕರ ಸಂಘಟನೆಯ ಕಾವು ಇಂದಿಲ್ಲ. ಇದಕ್ಕೆ ಸಾಫ್ಟ್‍ವೇರ್, ಹಾರ್ಡ್‍ವೇರ್ ಪಾರ್ಕ್ ಎಂಬ ಎ.ಸಿ. ಮಹಲುಗಳಲ್ಲಿ ಹಗಲಿರುಳು ದುಡಿಯುವ ನವಕಾರ್ಮಿಕರ ಕಾಣಿಕೆಯೂ ದೊಡ್ಡದಿದೆ.
ಇರಲಿ, ಇದರ ನಡುವೆ ಮಾಜಿ ಕ್ರಿಕೇಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಅವರು ತಮ್ಮ ಮನೆಯ ಕೆಲಸಗಾರ್ತಿಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ಇವರ ಮನೆಯಲ್ಲಿ ಒಡಿಶಾ ಮೂಲದ ಸರಸ್ವತಿ ಎಂಬಾಕೆ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೃತದೇಹವನ್ನು ಒಡಿಶಾಗೆ ಕಳುಹಿಸಲು ಸಾಧ್ಯವಾಗಿರಲಿಲ್ಲವಂತೆ. ನಿಜಕ್ಕೂ ಇದೊಂದು ಮೆಚ್ಚಬೇಕಾದ ಕಾರ್ಯ. ಬಹಳ ವರ್ಷಗಳಿಂದ ಮನೆಕೆಲಸದವರಿಬ್ಬರ ಇಂತಹದ್ದೇ ಪ್ರಸಂಗ ನನ್ನ ಮನದಲ್ಲಿ ಭಾರದಿಂದ ಕುಳಿತಿತ್ತು. ಅದನ್ನಿಂದು ನಿಮ್ಮ ಮುಂದಿಡುತ್ತಿರುವೆ.
ಮಾಧವರಾವ್ ಶಕ್ತಿವೇಲ್‍ನನ್ನು ಮನೆಕೆಲಸಕ್ಕೆಂದು ಖರೀದಿಸಿದಾಗ ಆತ 6 ವರ್ಷದ ಬಾಲಕನಾಗಿದ್ದ. ಸರ್ಕಾರದ ನಿಯಮಾವಳಿ ಪ್ರಕಾರ 1ನೇ ತರಗತಿ ಅಭ್ಯಾಸ ಮಾಡಬೇಕಿದ್ದ ಹುಡುಗ. ಮಾಧವರಾವ್ ಶಕ್ತಿವೇಲ್‍ನ ಗ್ರಾಮದ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಬೆಂಗಳೂರಿನ ರೈಲು ನಿಲ್ದಾಣಕ್ಕೆ ವರ್ಗಾವಣೆಯಾಗುತ್ತದೆ. ಹೀಗೆ ತೆರಳುವಾಗ ಮಾಧವರಾವ್ ತನ್ನ ಮಗನೊಂದಿಗೆ ಆಟವಾಡಿಕೊಂಡಿದ್ದ, ತಂದೆ ಇಲ್ಲದ ತಬ್ಬಲಿ ಶಕ್ತಿವೇಲ್‍ನನ್ನು ತನ್ನೊಂದಿಗೆ ಕರೆದೊಯ್ಯಲು ಇಚ್ಛಿಸುತ್ತಾರೆ. ಇದಕ್ಕಾಗಿ ಶಕ್ತಿವೇಲ್‍ನ ತಾಯಿಯ ಬಳಿ ಶಕ್ತಿವೇಲ್‍ನನ್ನು ತನ್ನೊಂದಿಗೆ ಕಳುಹಿಸಿಕೊಡಲು ವಿನಂತಿಸುತ್ತಾರೆ. ನಮ್ಮ ಮನೆಯಲ್ಲಿ ನಿಮ್ಮ ಮಗನನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡುತ್ತಾರೆ. ಶಕ್ತಿವೇಲ್‍ನ ತಾಯಿಗೂ ಮಗ ನಗರಕ್ಕೆ ಹೋಗಿ ವಿದ್ಯಾಭ್ಯಾಸ ಪಡೆದು ಮಾಧವರಾವ್ ಅವರಂತೆ ದೊಡ್ಡ ಅಧಿಕಾರಿಯಾಗಲಿ ಎಂಬ ಆಸೆ ಮೂಡುತ್ತದೆ. ಅಲ್ಲದೆ ಸ್ಟೇಷನ್ ಮಾಸ್ಟರ್ ಆಗಿದ್ದ ಮಾಧವರಾವ್ ಅವರ ಪತ್ನಿಯ ಸುಸಂಸ್ಕೃತ ನಡೆವಳಿಕೆ ಗ್ರಾಮದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು. ಹೀಗಾಗಿಯೇ ಶಕ್ತಿವೇಲ್‍ನ ತಾಯಿ ಮರುಮಾತಾಡದೆ ಮಗನನ್ನು ಕಳುಹಿಸಿಕೊಡಲು ಒಪ್ಪುತ್ತಾರೆ.
ಈ ಸಂಬಂಧ ಮಾಧವರಾವ್ ಶಕ್ತಿವೇಲ್‍ನ ತಾಯಿಯೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ಒಪ್ಪಂದದ ಅನ್ವಯ ಶಕ್ತಿವೇಲ್‍ನ ತಾಯಿ ಜೀವಿತಾವಧಿಯಲ್ಲಿ ಒಮ್ಮೆಯೂ ಮಾಧವರಾವ್ ಕಾರ್ಯನಿರ್ವಹಿಸುವ ಬೆಂಗಳೂರಿಗೆ ಹೋಗಬಾರದು. ಮುಖ್ಯವಾಗಿ ಶಕ್ತಿವೇಲ್‍ನನ್ನು ಕಾಣಬಾರದು. ಹಾಗೆಯೇ ಶಕ್ತಿವೇಲ್‍ನ ಕುರಿಗಾಹಿ ಕೌಟುಂಬಿಕ ಹಿನ್ನೆಲೆ ಹೇಳಬಾರದೆಂದು ಕಟ್ಟಪ್ಪಣೆ ಮಾಡುತ್ತಾರೆ. ಪಾಪದ ವಿಮಲಾ, ಶಕ್ತಿವೇಲ್‍ನ ತಾಯಿ ಮಾಧವರಾವ್ ಅವರೊಂದಿಗೆ ಒಪ್ಪಂದಕ್ಕೆ ಸಮ್ಮತಿ ನೀಡುವರು. ತಾನು ಎಂದಿಗೂ ಮಾಧವರಾವ್ ಮನೆಗೆ ಮಾತ್ರವಲ್ಲ, ಬೆಂಗಳೂರಿಗೂ ಕೂಡ ಭೇಟಿ ನೀಡುವುದಿಲ್ಲ ಹಾಗೂ ಆತನ ಸಂತಸದ ಜೀವನಕ್ಕೆ ಜೀವಿತಾವಧಿಯಲ್ಲಿ ಅಡ್ಡಿ ಬರುವುದಿಲ್ಲ ಎಂದು ಪ್ರಮಾಣವನ್ನು ಮಾಡುವರು.
ಶಕ್ತಿವೇಲ್ ಬೇರೆಯದೆ ವೃಕ್ಷದಿಂದ ಟಿಸಿಲೊಡೆದ ಟೊಂಗೆ. ಅಲ್ಲದೆ ಕುರಿಗಾಹಿ ಕುಟುಂಬದವನು. ಹೀಗಾಗಿ ಮತ್ತೊಂದು ವೃಕ್ಷ ಅದ್ಹೇಗೆ ಆ ಟೊಂಗೆಯನ್ನು ಲತೆಯಾಗಿ ಸ್ವೀಕರಿಸುವುದು. ಸ್ವೀಕರಿಸಲು ಒಪ್ಪಲಿಲ್ಲ. ಅಂದರೆ, ಮಾಧವರಾವ್‍ನ ಮನೆಯವರು ಶಕ್ತಿವೇಲ್‍ನನ್ನು ತಮ್ಮವನೆಂದು ಕರೆದುಕೊಳ್ಳಲು ಸಿದ್ಧರಿರಲಿಲ್ಲ. ಕೇವಲ ಮಾತಿನ ವಾಗ್ದಾನ ನೀಡಿದ್ದ ಮಾಧವರಾವ್ ಅದನ್ನು ಕೊಟ್ಟ ಘಳಿಗೆಯಲ್ಲಿಯೇ ಮರೆತುಬಿಟ್ಟಿದ್ದನು. ಮಾಧವರಾವ್‍ನ ಮನೆಯಲ್ಲಿ ಶಕ್ತಿವೇಲ್ ತನ್ನ 40 ವರ್ಷಗಳ ವೃತ್ತಿ ಜೀವನ ಸಂಕಷ್ಟದಿಂದಲೇ ಕೂಡಿತ್ತು. 40 ವರ್ಷಗಳ ಕಾಲ ಶಕ್ತಿವೇಲ್ ಮಾಡಿದ್ದೆಲ್ಲವೂ ಚಾಕರಿಯೇ ಆಗಿತ್ತು.
ಮನೆಯಲ್ಲಿದ್ದ ಎಲ್ಲರ ಬಟ್ಟೆಯನ್ನು ಒಗೆಯುವುದು, ಇಸ್ತ್ರಿ ಮಾಡುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು, ಕರೆತರುವುದು, ದಿನಸಿ ಪದಾರ್ಥ, ತರಕಾರಿ ಸೇರಿದಂತೆ ಎಲ್ಲಾ ಬಗೆಯ ಗೃಹೋಪಯೋಗಿ ವಸ್ತುಗಳನ್ನು ತರುವುದು, ತಂದ ಸಾಮಾನುಗಳನ್ನು ಜೋಡಿಸಿಡುವುದು, ಅಡುಗೆ ಮಾಡುವುದು, ಬಡಿಸುವುದು, ಪಾತ್ರೆ ತೊಳೆಯುವುದು ಎಲ್ಲವೂ ಶಕ್ತಿವೇಲ್‍ನದ್ದೇ ಕರ್ತವ್ಯವಾಗಿತ್ತು.
ಮಾಧವರಾವ್ ಕಾಲಾನಂತರ, ರೈಲ್ವೆ ಅಧಿಕಾರಿ ಹುದ್ದೆಯಿಂದ ನಿವೃತ್ತರಾದರು. ಹಾಗೆಯೇ ವಯಸ್ಸಾದಂತೆ, ಮುಪ್ಪಿನ ರೋಗಗಳು ಅಮರಿಕೊಂಡು ಪ್ರಾಣಬಿಟ್ಟರು. ಇವರ ಸಾವು ಮನೆಯ ಸದಸ್ಯರ, ಬಂಧು-ಬಳಗದವರ ದುಃಖದ ಕಟ್ಟೆಯೊಡೆಯಿತು. ಮನೆಯಲ್ಲಿದ್ದ ಆತನ ಧರ್ಮಪತ್ನಿ, ಮಕ್ಕಳು, ಸೊಸೆಯಂದಿರು ಎದೆಬಡಿದುಕೊಂಡು ಅತ್ತರು. ಕೆಲವರು ಮೈಗಾಯವಾಗುವಂತೆ ಬಡಿದುಕೊಂಡು ಅತ್ತರು. ಇನ್ನೂ ಕೆಲವರು ಮೈಮೇಲಿದ್ದ ಬಟ್ಟೆಯನ್ನೇ ಹರಿದುಕೊಂಡು ಅತ್ತರು. ಕೆಲವರಂತೂ ಮನೆಯ ಗೋಡೆಗೆ ತಲೆ ಚಚ್ಚಿಕೊಂಡು ಅತ್ತರು. ನಂತರ ಎಲ್ಲರೂ ಕೂಡಿ ಸಂಪ್ರದಾಯಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಿದರು. ಶಕ್ತಿವೇಲ್ ತನ್ನ ತಂದೆಯೇ ಸತ್ತುಹೋದಂತಹ ದುಃಖದಿಂದ ರೋಧಿಸತೊಡಗಿದನು.
ಹೀಗೆಯೇ ಕೆಲವು ತಿಂಗಳು ಕಳೆಯುತ್ತಿರುವಾಗ 45 ವರ್ಷದ ಶಕ್ತಿವೇಲ್ ಹೃದಯಾಘಾತಕ್ಕೊಳಗಾಗಿ ಜೀವಬಿಟ್ಟನು. ಆದರೆ, ಈತನ ಅಗಲುವಿಕೆಯ ಭಾವನೆ ಆ ಕುಟುಂಬದ ಯಾರೊಬ್ಬರಲ್ಲೂ ಇರಲಿಲ್ಲ. ಅವರ್ಯಾರ ಕಣ್ಣುಗಳು ತೇವವಾಗಿರಲಿಲ್ಲ. ಅವರ್ಯಾರು ಅಳಲಿಲ್ಲ. ಅವರ್ಯಾರು ಎದೆ ಬಡಿದುಕೊಂಡು ರೋಧಿಸಲೂ ಇಲ್ಲ. ಅವರ್ಯಾರು ಬಟ್ಟೆಯನ್ನು ಹರಿದುಕೊಂಡು ಅಳಲಿಲ್ಲ. ಅವರ್ಯಾರು ಮೈಗಾಯ ಮಾಡಿಕೊಂಡು ದುಃಖಿಸಲಿಲ್ಲ. ಆದರೂ, ಅಲ್ಲಿ ಶೋಕದ ಸಂದರ್ಭದಲ್ಲಿ ಉಂಟಾಗುವ ಮೌನ ಮಾತ್ರ ನೆಲೆಸಿತ್ತು. ವಿಷಣ್ಣತೆಯ ಭಾವ ಇತ್ತು. ಅಲ್ಲಿ ಇಬ್ಬರು ಮಾತ್ರ ಗಡಿಬಿಡಿಯಲ್ಲಿದ್ದರು. ಅವರು ಶಕ್ತಿವೇಲ್‍ನ ದೇಹಕ್ಕೆ ಸ್ನಾನ ಮಾಡಿಸಿ, ಅಂತಿಮ ಸಂಸ್ಕಾರಕ್ಕೆ ಸಿದ್ಧತೆಗೊಳಿಸುತ್ತಿದ್ದರು. ಅವರು ಸ್ಟೀಫನ್ ಮತ್ತು ಅಬ್ದುಲ್ಲಾ ಆಗಿದ್ದರು. ಇವರಿಬ್ಬರೂ ನೆರೆಯ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಕೂಡಿ ಇನ್ನಿಬ್ಬರನ್ನು ಕರೆತಂದು, ಶಕ್ತಿವೇಲ್‍ನ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಕೊಂಡೊಯ್ದರು.
ದಾರಿಯ ಮಧ್ಯೆ ಅಬ್ದುಲ್ಲಾ ಶೋಕಿಸುತ್ತಾ, ದುಃಖ ತಡೆಯಲಾರದೆ, ಮಾಧವರಾವ್ ಅವರ ಅಗಲುವಿಕೆಯನ್ನು ನೆನೆಯುತ್ತಾನೆ. ರಾವ್ ಸಾಹೇಬರು ಕುಟುಂಬದ ಮುಖ್ಯಸ್ಥರಾಗಿದ್ದರು. ಮಕ್ಕಳಿಗೆ ತಂದೆಯಾಗಿದ್ದರು. ಸೊಸೆಯರಿಗೆ ಮಾವನಾಗಿದ್ದರು. ಹೆಂಡತಿಗೆ ಗಂಡನಾಗಿದ್ದರು. ದೊಡ್ಡ ಹುದ್ದೆಯಲ್ಲಿದ್ದರು. ಗೆಳೆಯರ ಬಳಗವನ್ನು ಹೊಂದಿದ್ದರು. ಸಿರಿವಂತರಾಗಿದ್ದರು. ಹೀಗಾಗಿಯೇ ಅವರ ಅಗಲುವಿಕೆಗೆ ಕುಟುಂಬಸ್ಥರೆಲ್ಲರೂ ದುಃಖಿಸಿದರು, ರೋಧಿಸಿದರು.
ಆದರೆ, ಶಕ್ತಿವೇಲ್ ಅಗಲುವಿಕೆ ಅವನ ಮನೆಯವರಲ್ಲೇಕೆ ದುಃಖ ಮೂಡಿಸಲಿಲ್ಲ. ಇವನು ಕೂಡ ಮಾಧವರಾವ್ ಅವರಂತೆಯೇ ಮನುಷ್ಯನಲ್ಲವೇ? ಆ ಕುಟುಂಬದ ಏಳಿಗೆಗಾಗಿ ದುಡಿಯಲಿಲ್ಲವೇ? ಎಂದು ಅಬ್ದುಲ್ಲಾ ದುಃಖದಿಂದ ಹೇಳುತ್ತಾನೆ. ಶಕ್ತಿವೇಲ್ ಮೊದಲಿಗೆ ಸೇವಕ. ಅವನು ಮನೆ ಕೆಲಸಕ್ಕಷ್ಟೇ ಸೀಮಿತಗೊಂಡವನು. ಅವನ ಅಗಲುವಿಕೆ ಯಾವುದೇ ಹಣ ತಂದುಕೊಡುವುದಿಲ್ಲ. ಯಾವುದೇ ಆಸ್ತಿಯನ್ನು ತಂದುಕೊಡುವುದಿಲ್ಲ. ಸರ್ಕಾರಿ ನೌಕರರ ಅವಲಂಬಿತರಿಗೆ ಸಿಗುವಂತಹ ಪಿಂಚಣಿಯನ್ನು ತಂದುಕೊಡುವುದಿಲ್ಲ.
ಹೀಗಿರುವಾಗ ಶಕ್ತಿವೇಲ್‍ನ ಮರಣ ಅದ್ಹೇಗೆ ಮಾಧವರಾವ್ ಕುಟುಂಬವರ್ಗಕ್ಕೆ ದುಃಖ ತಂದುಕೊಡುತ್ತದೆ. ನಾವುಗಳಿರುವುದು ದುಡಿಯಲು ಮಾತ್ರ. ಅನಿವಾರ್ಯವಾಗಿ ದುರ್ಬರ ಜೀವನ ನಡೆಸಲೇಬೇಕು. ನಾವು ಸೇವಕರಾಗಿಯೇ ಸಾಯುತ್ತೇವೆ. ನಮ್ಮ ಸಾವಿಗೆ ಅಳುವವರು ಇರುವುದಿಲ್ಲ. ಅಳಲೇಬೇಕೆಂದರೆ ನಮ್ಮನ್ನು ದೂರಿದವರು ಅಳಬೇಕು ಅಷ್ಟೇ ಎಂದು ದುಃಖದ ನಿಟ್ಟುಸಿರು ಬಿಟ್ಟು ಹೇಳಿದನು.
ಅಬ್ದುಲ್ಲಾನ ಮಾತನ್ನು ಅಲ್ಲಿಗೆ ತುಂಡರಿಸಿ ಸ್ಟೀಫನ್, ಅಲ್ಲಿ ನೋಡು ಅಬ್ದುಲ್ಲಾ ಎಂದು ಶಕ್ತಿವೇಲ್‍ನ ಕಡೆಗೆ ಕೈ ತೋರಿಸುತ್ತಾನೆ. ಅಲ್ಲಿ ಶಕ್ತಿವೇಲ್‍ನನ್ನು ಮಣ್ಣುಮಾಡಲು ಮಾಧವರಾವ್ ಸಮಾಧಿಯ ಪಕ್ಕದಲ್ಲಿಯೇ ಗುಂಡಿಯನ್ನು ತೋಡಿರುತ್ತಾರೆ. ಶಕ್ತಿವೇಲ್ ಬದುಕಿದ್ದಾಗ ಒಂದು ದಿನವೂ ಮಾಧವರಾವ್ ಅವರ ಪಕ್ಕ ಕುಂತವನಲ್ಲ. ಅಂತೂ ಸತ್ತಮೇಲಾದರೂ, ಮಾಲೀಕನ ಪಕ್ಕದಲ್ಲಿಯೇ ಮಣ್ಣಾಗುತ್ತಿರುವನು.
ಇನ್ನೊಂದು ಪ್ರಕರಣ, ಅದು ಇನ್‍ಫೆಂಟ್ರಿ ರಸ್ತೆ. ಇಪ್ಪತ್ತು ವರ್ಷಗಳ ಹಿಂದೆ ಅದೊಂದು ಪಕ್ಕಾ ವಸತಿ ಪ್ರದೇಶ. ಅಲ್ಲಿ ಭಾರತ್ ಭವನ್, ಮೆಟ್ರೊಪೋಲ್, ಸೆಲೆಕ್ಟ್ ಹೋಟೆಲ್‍ಗಳದ್ದೇ ಕಾರುಬಾರು. ಅಲ್ಲಿದ್ದ ರೇಣುಕಾ, ಸಂಗೀತ, ಸಂದೀಪ್, ಎಲ್ಜಿನ್, ಬಿ.ಆರ್.ವಿ. ಚಿತ್ರಮಂದಿರಗಳು ಜನನಿಬಿಡದಿಂದ ಕೂಡಿರುತ್ತಿದ್ದವು. ಶಿವಾಜಿನಗರದಲ್ಲಿರುವ ಚರ್ಚು, ರಸೆಲ್ ಮಾರ್ಕೆಟ್, ನಾಯಿಮರಿ, ಮೀನು, ತರೇಹವಾರಿ ಪಕ್ಷಿಗಳನ್ನು ಮಾರುವ ಅಂಗಡಿಗಳ ಸಾಲು, ಸಮೋಸಾ-ಟೀ ಅಂಗಡಿಗಳ ಸಮೂಹ ಕಣ್ಮನ ಸೆಳೆಯುತ್ತಿದ್ದವು. ಕಾಮರಾಜ ರಸ್ತೆ ಪಕ್ಕದಲ್ಲಿರುವ ಕಮರ್ಷಿಯಲ್ ಬೀದಿಗಳು ಮೊದಲಿನಿಂದಲೂ ಜನಾಕರ್ಷಣೆಯನ್ನು ಹೊಂದಿತ್ತು. ಈಗಿನ ಸಫೀನಾ ಪ್ಲಾಜಾ ಬಳಿ ಅಪಾರ್ಟ್‍ಮೆಂಟಿತ್ತು. ಹಾಗೆಯೇ ಇಂದಿನ ವಾರ್ತಾ ಇಲಾಖೆಯ ಮುಂಭಾಗದಲ್ಲಿಯೂ ಅಪಾರ್ಟ್‍ಮೆಂಟ್ ಒಂದಿತ್ತು. ಅಲ್ಲಿ ಮಧ್ಯ ವಯಸ್ಸಿನ ತಾಯಿಯೊಬ್ಬಳು ತನ್ನ ಹಸುಗೂಸನ್ನು ಕಂಕುಳಲ್ಲಿ ಹೊತ್ತಿದ್ದಳು. ಇನ್ನೊಂದು ಕೈಯಲ್ಲಿ ದಿನಸಿ ಸಾಮಾನು, ತರಕಾರಿ ಬ್ಯಾಗನ್ನು ಹೊರಲಾಗದೆ ಹೊತ್ತು ಬಿರಬಿರನೆ ಅಪಾರ್ಟ್‍ಮೆಂಟಿನ ಗೇಟಿನತ್ತ ಸಾಗುತ್ತಿದ್ದಳು. ಗೇಟಿನಲ್ಲಿ ದಪ್ಪ ಮೀಸೆ ಹೊತ್ತ ಸೆಕ್ಯೂರಿಟಿ ಗಾರ್ಡ್ ಎಂಬ ಆಸಾಮಿ ಮೀಸೆ ತಿರುವುತ್ತಾ, ಸಿಕ್ರೋ ಓಡಿವಾ ನೀಲಾ, ಕಾರು ವರೋ ಟೈಂ ಎಂದು ಕೂಗುತ್ತಿದ್ದನು. ಇದೇ ದಾರಿಯಲ್ಲಿ ಸಾಗುತ್ತಿದ್ದ ನನಗೆ ಆಕೆಯನ್ನು ಕಂಡು ಮಮ್ಮಲ ಮರುಗಿದೆ.
ಸೊಂಟದ ಮೇಲೆ ಮಗು ಹೊತ್ತು, ಇನ್ನೊಂದು ಭುಜಕ್ಕೆ ಬ್ಯಾಗುಗಳನ್ನು ನೇತು ಹಾಕಿಕೊಂಡಿದ್ದ ನೀಲಾಳಿಂದ ಬ್ಯಾಗನ್ನು ಸೆಕ್ಯೂರಿಟಿ ಗಾರ್ಡ್ ಪಡೆಯುವನೆಂದು ಭಾವಿಸಿದ್ದೆ. ಆದರೆ, ಅವನು ಪಡೆಯಲಿಲ್ಲ. ಹೀಗಾಗಿ, ಅವನೊಬ್ಬ ದುರಹಂಕಾರಿ ಎಂದು ಶಪಿಸಿ ಅಲ್ಲಿಂದ ಮುಂದೆ ಸಾಗಿದೆ. ಇಷ್ಟಕ್ಕೂ ಆಕೆಯ ಹೆಸರು ಎರಡು ದಶಕಗಳು ಕಳೆದರೂ ಏಕೆ ನೆನಪಿನಲ್ಲಿಟ್ಟುಕೊಂಡಿರುವೆ ಎನ್ನುವಿರಾ. ಅದೊಂದು ಮರೆಯಲಾಗದ ದೃಶ್ಯ. ಮರೆಯಲು ನಾನಂದು ಅನುಭವಿಸಿದ ಯಾತನೆ ಬಿಡುತ್ತಿಲ್ಲ. ಇರಲಿ, ಆಕೆಯ ಬಡಕಲು ಬಿದ್ದ ಶರೀರ, ಕುಳಿಬಿದ್ದ ಕಣ್ಣುಗಳು ಅವನಲ್ಲಿ ಮಾತ್ರವಲ್ಲ, ಆ ಅಪಾರ್ಟ್‍ಮೆಂಟಿನ ಯಾರಲ್ಲೂ ಎಳ್ಳಷ್ಟು ಮರುಕ ಮೂಡಿಸಿರಲಿಲ್ಲ.
ಇವರುಗಳಿಗೆ ಮನೆಕೆಲಸದವರು ಎಂದರೆ, ಕಸ-ಮುಸುರೆ ಎತ್ತುತ್ತಲೇ ಜೀವಬಿಡಬೇಕು. ಕಂಕುಳಲ್ಲಿ ಹೊತ್ತಿರುವ ಮಗು ಅತ್ತರೂ, ಅದಕ್ಕೆ ಹಾಲುಣಿಸದಷ್ಟು ದಾರುಣತೆಯನ್ನು ನೀಲಾಳಲ್ಲಿ ಬೆಳೆಸಿಬಿಟ್ಟಿದ್ದರು. ಒಂದೊಮ್ಮೆ ಹಾಲುಣಿಸಲು ಮುಂದಾದರೆ ಸಂಬಳ ನೀಡುವ ಧಣಿ, ಅವರ ಕುಟುಂಬಸ್ಥರು ಎಲ್ಲಿ ನಿಂದಿಸುವರೋ ಎಂಬ ಭಯ ಆಕೆಯಲ್ಲಿತ್ತು. ಮನೆಯಿಂದ ಹೊರಬಂದು ಹಾಲುಣಿಸಿದರೆ, ಮತ್ತದೇ ಸೆಕ್ಯೂರಿಟಿ ಗಾರ್ಡ್‍ಗಳ ಕರ್ಕಶಧ್ವನಿ ಗದರಿಸುತ್ತಿತ್ತು. ಹೀಗಾಗಿಯೇ ನೀಲಾ ಮನೆಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಳು. ಆಕೆಯ ಮಗು ಅಲ್ಲಿದ್ದ ಇರುವೆ ಕಡಿತಕ್ಕೊ ಅಥವಾ ಸೊಳ್ಳೆಯ ಕಡಿತಕ್ಕೋ ಈಡಾಗಿ ಅತ್ತಾಗ ನೀಲಾಳ ತಾಯಿಯ ಹೃದಯ ಕದಲಿಬಿಡುತ್ತಿತ್ತು.
ಆಗ ಎಲ್ಲಿಲ್ಲದ ಆವೇಶವನ್ನು ಅವಗಾಹಿಸಿಕೊಂಡು ಬಿಡುತ್ತಿದ್ದಳು. ಆ ಕ್ಷಣಕ್ಕೆ ಬಂಡಾಯದ ಗೆರೆಯು ಅವಳಲ್ಲಿ ಕಾಣಿಸುತ್ತಲಿತ್ತು. ತೊಳೆಯುವ ಪಾತ್ರೆಯನ್ನೋ ಅಥವಾ ಕಸಗುಡಿಸುತ್ತಿದ್ದ ಪೊರಕೆಯನ್ನೋ ಬಿಸಾಡಿ ಮಗುವಿಗೆ ಮೊಲೆಯೊಡ್ಡುತ್ತಿದ್ದಳು.
ಇದು ಅಪಾರ್ಟ್‍ಮೆಂಟಿನ ಸೆಕ್ಯೂರಿಟಿ ಗಾರ್ಡ್ ಕಣ್ಣಿಗೆ ಬಿದ್ದರಂತೂ ಸಿಡಿಮಿಡಿಗೊಂಡುಬಿಡುತ್ತಿದ್ದನು. ನೀಲಾಳ ಬಳಿ ಧಾವಿಸಿ, ಮೈಗಳ್ಳತನ ಹೆಚ್ಚಾಗುತ್ತಿದೆ, ಇದಕ್ಕೆ ನಿನ್ನ ಮಗು ಒಂದು ನೆಪ, ಮಗುವನ್ನು ಆ ಕಡೆ ಮಲಗಿಸಿ ಮೊದಲು ಕಸಗುಡಿಸು ಎಂದು ಗದರುತ್ತಿದ್ದನು. ನಿತ್ಯವೂ ಇಂತಹ ದೃಶ್ಯಗಳನ್ನು ಕಂಡಿದ್ದೆನಾದ್ದರಿಂದ, ಒಂದು ದಿನ ಮಗುವಿಗೆ ಹಾಲುಣಿಸಲು ಬಿಡಿ ಸಾರ್ ಎಂದುಬಿಟ್ಟೆ. ಆಗ ನೀಲಾಳ ಮುಖದಲ್ಲಿ ಕೃತಜ್ಞತೆಯ ಗೆರೆ ಕಾಣಿಸಿತು. ಆದರೆ, ಇದು ಸೆಕ್ಯುರಿಟಿ ಗಾರ್ಡ್‍ನ ಕಣ್ಣನ್ನು ಕೆಂಪಗಾಗಿಸಿತು. ಇದು ನನ್ನಲ್ಲಿ ಇವತ್ತೊಂದು ಒಳ್ಳೆಯ ಕೆಲಸ ಮಾಡಿದೆ ಎಂಬ ತೃಪ್ತಿಯ ಭಾವ ಮೂಡಿಸಿತ್ತು.
ಇದರ ನಡುವೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯೂ ಅಲ್ಲಿ ನಡೆದಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಸ್ತನ್ಯಪಾನ ಮಾಡಿದ ಭೂಮಿಯಲ್ಲಿ ಹಾಲುಣಿಸುವ ಅಂಗವನ್ನು ಕಾಮದ ದೃಷ್ಟಿಯಿಂದ ಎರಡು ಕಣ್ಣುಗಳು ಅಪಾರ್ಟ್‍ಮೆಂಟಿನ ಮನೆಯೊಂದರ ಕಿಟಕಿಯಿಂದ ದಿಟ್ಟಿಸಿ ನೋಡುತ್ತಿದ್ದವು. ಹಾಲುಣ್ಣುತ್ತಿದ್ದ ಮಗು ನಿದ್ರೆಗೆ ಜಾರಿದ್ದರಿಂದ, ನೀಲಾ ಅರ್ಧದಲ್ಲಿ ಬಿಟ್ಟಿದ್ದ ಕಸಗುಡಿಸುವ ಕೆಲಸಕ್ಕೆ ಪೊರಕೆ ಹಿಡಿದು ನಿಂತಳು. ಅಂದಿನಿಂದ ಆ ಹಾದಿಯಲ್ಲಿ ಸಾಗುತ್ತಿದ್ದಾಗ ಸೆಕ್ಯುರಿಟಿ ಗಾರ್ಡ್ ನನ್ನನ್ನು ದುರುಗುಟ್ಟಿ ನೋಡಲಾರಂಭಿಸಿದನು. ಇದು ನನ್ನಲ್ಲಿ ಭಯ ಮೂಡಿಸಿತಾದರೂ, ಅಂಜದಂತೆ ಹೆಜ್ಜೆಹಾಕುತ್ತಾ ಸಾಗುತ್ತಿದ್ದೆ.
ಅಂತೂ ಒಂದು ದಿನ ಅಪಾರ್ಟ್‍ಮೆಂಟ್ ನೆಲಸಮವಾಯಿತು. ಅಲ್ಲಿ ಮನೆಕೆಲಸ ಮಾಡುತ್ತಿದ್ದ ನೀಲಾ ಮತ್ತವಳ ಮಗು ಎಲ್ಲಿ ಹೋದರೆಂಬುದೇ ಪ್ರಶ್ನೆಯಾಗಿ ಉಳಿದಿದೆ. ಎಲ್ಲಿಯೇ ಇದ್ದರೂ ಮನೆಕೆಲಸ ಮಾಡುತ್ತಿದ್ದ ನೀಲಾಳ ಮಗ ಖಂಡಿತವಾಗಿಯೂ ಎದೆಯೆತ್ತರ ಬೆಳೆದಿರುತ್ತಾನೆ. ಶಿಕ್ಷಣ ಗಳಿಸಿದ್ದರೆ, ಇನ್‍ಫೆಂಟ್ರಿ ರಸ್ತೆಯಲ್ಲಿ ಕಾರಿನಲ್ಲೋ, ಬೈಕಿನಲ್ಲೋ ಓಡಾಡಿರಲೇಬೇಕು. ಅವರು ಕಾರಿನಲ್ಲಿಯೇ ಸಂಚರಿಸಲಿ, ಅಪಮಾನ ಕಂಡ ರಸ್ತೆಯಲ್ಲೇ ಎದೆಯುಬ್ಬಿಸಿ ನಡೆಯುವಂತಾಗಲಿ ಎಂದು ಹಾರೈಸುವೆ.










