ಮರ್ಯಾದಾ ಹತ್ಯೆ: ಪ್ರೀತಿಗೆ ಬಿದ್ದ ಹಿರಿ ಮಗಳ ಹತ್ಯೆಗೈದ ತಂದೆ…

72
firstsuddi

ಬೆಂಗಳೂರು: ಮರ್ಯಾದೆಗೆ ಅಂಜಿ ವ್ಯಕ್ತಿಯೊಬ್ಬ ತನ್ನ ಹಿರಿಯ ಮಗಳನ್ನೇ ಹತ್ಯೆಗೈದಿರುವ ಘಟನೆ ನಿನ್ನೆ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.

ಕವನಾ (20) ಹತ್ಯೆಯಾದ ಯುವತಿ. ತನ್ನ ಮಗಳನ್ನು ಹತ್ಯೆಗೈದ ಬಳಿಕ ಆರೋಪಿ ಮಂಜುನಾಥ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮಂಜುನಾಥ್ ಅವರ ಕಿರಿಯ ಮಗಳು ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರನ ಜೊತೆಗೆ ಹೋಗುವುದಾಗಿ ಕಳೆದ ಮಂಗಳವಾರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಳು. ಪ್ರೀತಿಸಿದವನ ಜೊತೆ ಹೋಗುವುದಾಗಿ ಠಾಣೆಯಲ್ಲಿ ಪಟ್ಟು ಹಿಡಿದಿದ್ದು, ಪೊಲೀಸರು ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಹಿರಿ ಮಗಳು ಸಹ ಪ್ರೀತಿ ಬಲೆಯಲ್ಲಿರುವ ವಿಚಾರ ತಿಳಿದಿದ್ದ ತಂದೆ ಮಂಜುನಾಥ್, ಚಿಕ್ಕ ಮಗಳು ಮರ್ಯಾದೆ ಕಳೆದಳು, ಇನ್ನು ಇವಳು ಕೂಡ ಗ್ರಾಮದಲ್ಲಿ ನಮ್ಮ ಮರ್ಯಾದೆ ಕಳೆಯುತ್ತಾಳೆ ಅಂತ ಹಿರಿ ಮಗಳನ್ನು ಕೊಲೆ ಮಾಡಿದ್ದಾನೆ.

ಆರೋಪಿ ಮಂಜುನಾಥ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಮಗಳ ಪ್ರೀತಿಯ ವಿಚಾರ ತಿಳಿದ ನಂತರ ಮಂಜುನಾಥ್, ರಾತ್ರಿ ವೇಳೆ ನಿದ್ದೆಗೆ ಜಾರಿದ್ದ ಮಗಳು ಕವನಾಳ ಕತ್ತನ್ನು ಕೋಳಿ ಕೊಯ್ಯುವ ಚಾಕುವಿನಿಂದಲೇ ಕೊಯ್ದು, ಕಟ್ಟಿಗೆಯಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.