ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೆತ್ ನೋಟ್ ಪತ್ತೆಯಾಗಿದೆ.
ಬಸವಲಿಂಗ ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಮಠದ ತಮ್ಮ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ನೋಟ್ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರು ಸಹಾಯಕ್ಕೆ ಇರಲಿಲ್ಲ. ಕೆಲವರು ಬೆದರಿಕೆ ಹಾಕಿದ್ದಾರೆ ಅಂತಾ ಡೆತ್ನೋಟ್ನಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಡೆತ್ ನೋಟ್ ಕುದೂರು ಪೊಲೀಸರ ಕೈ ಸೇರಿದ್ದು, ಪೊಲೀಸರ ತನಿಖೆ ಬಳಿಕ ಡೆತ್ ನೋಟ್ ರಹಸ್ಯ ಬಹಿರಂಗವಾಗಲಿದೆ.
ಶ್ರೀಗಳು 1 ರಿಂದ 8ನೇ ತರಗತಿವರೆಗೂ ಬಂಡೆಮಠದಲ್ಲೇ ವಿದ್ಯಾಭ್ಯಾಸ ಮಾಡಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಿದ್ದಗಂಗಾ ಮಠಕ್ಕೆ ತೆರಳಿದ್ದರು. ಶ್ರೀಗಳು ಮಠದಲ್ಲೇ ವೇದ, ಉಪನಿಷತ್, ವಿದ್ವತ್ ವ್ಯಾಸಂಗ ಮಾಡಿದ್ದರು. ಸ್ವಾಮೀಜಿಗಳ ಹೆಸರಲ್ಲಿ 80 ಎಕರೆ ಜಮೀನು ಇದೆ. ಬಂಡೆಮಠದಲ್ಲಿ ಮರಿಸ್ವಾಮಿಗಳಾಗಿ 2 ವರ್ಷದ ನಂತರ 25 ವರ್ಷಗಳ ಹಿಂದೆ ಪೀಠ ಅಲಂಕರಿಸಿದ್ದರು. ಬಂಡೆಮಠದ ಆವರಣದಲ್ಲಿ ಮಧ್ಯಾಹ್ನ 3:30 ನಂತರ ಲಿಂಗಾಯತ ಸಂಪ್ರದಾಯದಂತೆ ಸ್ವಾಮೀಜಿಯವರ ಅಂತ್ಯಸಂಸ್ಕಾರ ನಡೆಯಲಿದೆ.










