ಚಿಕ್ಕಮಗಳೂರು : ಮಳೆಯಿಂದ ಕುಸಿತಕ್ಕೊಳಗಾಗಿ ಬಿರುಕು ಬಿಟ್ಟಿರುವ ಸಿ.ಎನ್.ಆರ್.ಪುರ ರಸ್ತೆಯನ್ನು ಕೂಡಲೇ ದುರಸ್ಥಿಪಡಿಸುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ತಾಲ್ಲೂಕಿನ ಶಿರವಾಸೆಯಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.
ಗ್ರಾಮದ ವೃತ್ತದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಕಛೇರಿ ಎದುರು ಪ್ರತಿಭಟನೆ ನಡೆಸಿ ರಸ್ತೆ ದುರಸ್ಥಿಪಡಿಸದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳ ಹಿಂದೆ ಸುರಿದ ಬಾರೀ ಮಳೆಗೆ ಸಿ.ಎನ್.ಆರ್.ಪುರ ರಸ್ತೆ ಹೊನ್ನಾಳ ಚೆಕ್‍ಪೋಸ್ಟ್ ಸಮೀಪ 15 ಮೀಟರ್‍ನಷ್ಟು ಸಂಪೂರ್ಣ ಕುಸಿತಕ್ಕೊಳಗಾಗಿ 10 ಮೀಟರ್‍ನಷ್ಟು ಬಿರುಕು ಬಿಟ್ಟಿದೆ. ಇದರಿಂದಾಗಿ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ ಎಂದು ಆರೋಪಿಸಿದರು.
ಶಿರವಾಸೆ, ಗಾಳಿಗುಡ್ಡೆ, ಸುಗುಡವಾನಿ, ಕಡವಂತಿ, ಬೆಳಗೊಳ, ಜಾಗರ, ಬೊಗಸೆ, ಹುಲುವತ್ತಿ, ಮೇಲುಹುಲುವತ್ತಿ ಮತ್ತು ಕೊಳಗಾಮೆ ಗ್ರಾಮಗಳ ಜನರಿಗೆ ಓಡಾಡಲು ಈ ರಸ್ತೆಯೊಂದೇ ಆಧಾರವಾಗಿದ್ದು ಇದೀಗ ಹಾಳಾಗಿರುವುದರಿಂದಾಗಿ ಅಗತ್ಯ ವಸ್ತುಗಳ ಖರೀದಿ, ತೋಟ, ಜಮೀನು, ಆಸ್ಪತ್ರೆ ಮತ್ತು ಚಿಕ್ಕಮಗಳೂರಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರಸ್ತೆ ದುರಸ್ಥಿಪಡಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ಕೂಡಲೇ ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಲೋಕೋಪಯೋಗಿ ಇಲಾಖೆ ಕಛೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಪ್ರೇಮಾಕ್ಷಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ ತಾಲ್ಲೂಕು ಕಾರ್ಯದರ್ಶಿ ಜಾರ್ಜ್ ಆಸ್ಟಿನ್, ಸಹ ಕಾರ್ಯದರ್ಶಿ ಎಸ್.ಕೆ.ದಾನು, ವಲಯ ಕಾರ್ಯದರ್ಶಿ ಕೆ.ರವಿ, ಜಿ.ಎಸ್.ತಾರಾನಾಥ್, ಕೆ.ರಾಜು, ಗಂಗಯ್ಯ, ದೇಜು, ವಾಸುಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










