ಮೂಡಿಗೆರೆ : ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಮನೆ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ.
ಚಂದ್ರಮ್ಮ, ಸರಿತಾ ಮೃತ ದುರ್ದೈವಿಗಳು. ಮನೆ ಶಿಥಿಲಗೊಂಡಿರುವ ಕಾರಣದಿಂದ ಸರಿತಾ ಎಂಬುವವರು ತನ್ನ ಇಬ್ಬರು ಮಕ್ಕಳೊಂದಿಗೆ ಚಂದ್ರಮ್ಮ ಎಂಬವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ ನಿನ್ನೆ ಸುರಿದ ಭಾರೀ ಮಳೆಗೆ ಚಂದ್ರಮ್ಮ ಅವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಇದರಿಂದ ಸರಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಂದ್ರಮ್ಮ ಮೃತಪಟ್ಟಿದ್ದಾರೆ. ಸರಿತಾರವರ ಇಬ್ಬರು ಮಕ್ಕಳು ಸುನೀಲ್, ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಭಾರೀ ಮಳೆ ಹಿನ್ನಲೆ ಮುಂಜಾಗ್ರತ ಕ್ರಮವಾಗಿ ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ. 1ರಿಂದ 10ನೇ ತರಗತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಬಿಇಒ ಆದೇಶಿಸಿದ್ದಾರೆ.










