ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಇಂದು ಮಹಾಕುಂಭ ಮೇಳದ ಇಸ್ಕಾನ್ ಶಿಬಿರದಲ್ಲಿ ಪ್ರಸಾದ ತಯಾರಿಸಿ ಸೇವೆ ಸಲ್ಲಿಸಿದ್ದಾರೆ. ಜ.13 ರಿಂದ ಫೆ.26 ರವರೆಗಿನ ಮಹಾಕುಂಭ ಮೇಳದ ಸಂಪೂರ್ಣ ಅವಧಿಗೆ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ ಮಹಾಪ್ರಸಾದ್ ಸೇವಾ ಉಪಕ್ರಮದಡಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಾಪ್ರಸಾದ ಸೇವೆಯು ಐವತ್ತು ಲಕ್ಷ ಭಕ್ತರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. 2 ದೊಡ್ಡ ಅಡುಗೆಮನೆಗಳಲ್ಲಿ ಊಟವನ್ನು ತಯಾರಿಸಿ ಮೇಳದ ಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ವಿತರಿಸಲಾಗುತ್ತದೆ. ಪ್ರತಿದಿನ ಒಂದು ಲಕ್ಷ ಭಕ್ತರಿಗೆ ಆಹಾರವನ್ನು ನೀಡುವ ನಿರೀಕ್ಷೆಯಿದೆ. ಈ ಕುರಿತು ಮಾತಾಡಿದ ಅವರು, ಮಹಾಕುಂಭ ಮೇಳದಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಕುಂಭ ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರವಾಗಿದೆ. ಇಸ್ಕಾನ್ ಸಹಯೋಗದೊಂದಿಗೆ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆಯನ್ನು ಮಾಡುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.










