ಶಹರಾನ್ಪುರ: ಪಾಪ ಮಾಡಿದವರು ಮಾತ್ರ ಮಹಾ ಕುಂಭ ಮೇಳಕ್ಕೆ ಹೋಗುತ್ತಾರೆ ಎಂದು ಆಜಾದ್ ಸಮಾಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ನಾಗಿನ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ರಾವಣ ಟೀಕಿಸಿದ್ದಾರೆ. ನಿನ್ನೆ ಶಹರಾನ್ಪುರ್ ಎಂಪಿ-ಎಂಎಲ್‍ಎ ನ್ಯಾಯಾಲಯಕ್ಕೆ ಹಾಜರಾದ ಆಜಾದ್, ಕೇವಲ ಪಾಪ ಮಾಡಿದವರು ಮಾತ್ರ ಮಹಾ ಕುಂಭ ಮೇಳಕ್ಕೆ ಬರುತ್ತಾರೆ. ಪಾಪ ಮಾಡಿದವರು ಮಾತ್ರ ಅಲ್ಲಿಗೆ ಹೋಗಬೇಕು. ಆದರೆ, ಯಾರೇ ಆದ್ರೂ ತಾವು ಪಾಪ ಮಾಡಿರುವುದಾಗಿ ಹೇಳುತ್ತಾರೆಯೇ ಎಂದು ಹೇಳಿದರು. ತಮ್ಮ ಮೇಲಿನ ದಾಳಿ ಪ್ರಕರಣದ ತನಿಖೆಗಾಗಿ ಅಜಾದ್ ಅವರು ಕೋರ್ಟ್ ತನಿಖೆಗೆ ಹಾಜರಾಗಿದ್ದರು. ಈ ವೇಳೆ ಮಾತನಾಡಿ, ಆಜಾದ್ ಸಮಾಜ್ ಪಕ್ಷ ಸಮಾಜದ ಬಡ ಮತ್ತು ದುರ್ಬಲ ವರ್ಗದವರ ಹಕ್ಕು ಮತ್ತು ಗೌರವಗಳಿಗಾಗಿ ಹೋರಾಡುತ್ತಿದೆ. ಇವರು ಧರ್ಮ ಮತ್ತು ಸಮುದಾಯದ ಹೆಸರಿನಲ್ಲಿ ಹಲವು ವರ್ಷಗಳಿಂದ ತಾರತಮ್ಯಕ್ಕೆ ಒಳಗಾಗಿದ್ದಾರೆ. ಇಂದೂ ಕೂಡ ಮಾಧ್ಯಮ, ಪೊಲೀಸ್, ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ಆಗಾಗ್ಗೆ ದುರ್ಬಲರ ವಿರುದ್ಧ ನಿಲ್ಲುವುದನ್ನು ಕಾಣಬಹುದು ಎಂದು ಹೇಳಿದರು. ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವಾಗ್ದಾಳಿ ನಡೆಸಿ, ಉತ್ತರ ಭಾರತದಲ್ಲಿನ ಪರಿಸ್ಥಿತಿ ಕೆಟ್ಟದಾಗಿದ್ದು, ಇಲ್ಲಿ ಜಂಗಲ್ ರಾಜ್ ಇದೆ. ಸಿಎಂಗಳು ನಿರಂಕುಶ ವರ್ತನೆಯನ್ನು ಅಳವಡಿಸಿಕೊಂಡಿದ್ದಾರೆ. ಅವರಿಗೆ ಬೇಕಾದ್ದನ್ನು ಅವರು ಮಾಡುತ್ತಾರೆ. ಇದರಿಂದ ಕೆಲವರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಚಿಂತಿಸುವುದಿಲ್ಲ. ನನ್ನನ್ನು ಕೂಡ ಕೊಲೆ ಮಾಡುವ ಯತ್ನ ನಡೆಯಿತು ಎಂದು ಆರೋಪಿಸಿದರು.










