ಚೆನ್ನೈ: ಮಹಿಳಾ ಪೊಲೀಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಮಾಜಿ ಡಿಜಿಪಿ ಅಧಿಕಾರಿಗೆ ವಿಲ್ಲುಪುರಂ ನ್ಯಾಯಾಲಯವು ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ತಮಿಳುನಾಡಿನ ಮಾಜಿ ಡಿಜಿಪಿ ರಾಜೇಶ್ ದಾಸ್ ದೋಷಿ ಎಂದು ಸಾಬೀತಾಗಿದ್ದು, ನ್ಯಾಯಾಲಯ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
2021ರ ಫೆಬ್ರವರಿಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿ ರಾಜೇಶ್ ದಾಸ್ ವಿರುದ್ಧ ದೂರು ದಾಖಲಿಸಿದ್ದರು. ಅಂದಿನ ಮುಖ್ಯಮಂತ್ರಿ ಆಗಿದ್ದ ಎಡಪ್ಪಾಡಿ ಕೆ ಪಳನಿಸಾಮಿ ಅವರ ಭದ್ರತೆಗಾಗಿ ಕರ್ತವ್ಯದ ಮೇಲೆ ಪ್ರಯಾಣಿಸುತ್ತಿದ್ದಾಗ ಅಧಿಕಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದರು. ಇದಾದ ಬಳಿಕ ಅಂದಿನ ಎಐಎಡಿಎಂಕೆ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ದಾಸ್ ನನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಅಲ್ಲದೇ ಪ್ರಕರಣದ ವಿಚಾರಣೆಗೆ ಆರು ಜನರ ತನಿಖಾ ತಂಡವನ್ನು ರಚನೆ ಮಾಡಿತ್ತು.
ಪ್ರಾಸಿಕ್ಯೂಷನ್, ಪೊಲೀಸ್ ಸಿಬ್ಬಂದಿ ಸೇರಿದಂತೆ 68 ಜನರ ಹೇಳಿಕೆಗಳನ್ನು ದಾಖಲಿಸಿದೆ. ರಾಜೇಶ್ ದಾಸ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು, ತಕ್ಷಣದ ಜಾಮೀನು ಪಡೆಯಬಹುದು ಎಂದು ಪ್ರಾಸಿಕ್ಯೂಷನ್ ತಂಡದ ಸದಸ್ಯರೊಬ್ಬರು ಹೇಳಿದರು.
ಈ ವಿಷಯವು 2021ರಲ್ಲಿ ಚುನಾವಣಾ ವಿಷಯವಾಗಿ ಮಾರ್ಪಟ್ಟಿತ್ತು ಮತ್ತು ಆಗಿನ ವಿರೋಧ ಪಕ್ಷದ ನಾಯಕ ಎಂಕೆ ಸ್ಟಾಲಿನ್ ನಾವು ಅಧಿಕಾರಕ್ಕೆ ಬಂದರೆ ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳಲಾಗುವುದು ಮತ್ತು ಶಿಕ್ಷೆಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು.










