ಮಂಡ್ಯ: ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಗಂಗಾ (38) ಕೊಲೆಯಾದ ದುರ್ದೈವಿ. ಇವರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ನಿಮಿಷಾಂಬ ದೇವಾಲಯದ ಬಳಿಯ ಕಾವೇರಿ ನದಿಯಲ್ಲಿ ಕಾಸು ಹೆಕ್ಕುವ ಕೆಲಸವನ್ನು ಮಾಡುತ್ತಿದ್ದರು.
ಇವರು ಮೈಸೂರು – ಬೆಂಗಳೂರು ಮೇಲ್ಸೇತುವೆಯ ಕೆಳಗೆ ತಮ್ಮ ಗುಂಪಿನೊಂದಿಗೆ ವಾಸಿಸುತ್ತಿದ್ದರು. ಇವರ ಗುಂಪಿನ ಸದಸ್ಯರೆಲ್ಲರೂ ನಿರಾಶ್ರಿತರಾಗಿದ್ದು, ಮಹಿಳೆಯ ಹತ್ಯೆಯ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಮೃತ ಮಹಿಳೆ ಸಂಪರ್ಕದಲ್ಲಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










