ಮಹಿಳೆ ಮೇಲೆ ಅತ್ಯಾಚಾರವೆಸಗಿ ಖಾಸಗಿ ಭಾಗಕ್ಕೆ ರಾಡ್ ತುರುಕಿದ ದುರುಳರು…

140
firstsuddi

ನವದೆಹಲಿ : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

40 ವರ್ಷದ ಮಹಿಳೆಯನ್ನು ಅಪಹರಿಸಿದ ಐವರು ದುಷ್ಕರ್ಮಿಗಳ ಗುಂಪು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಎರಡು ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ಬಹಳ ಗಂಭೀರವಾಗಿದೆ. ಒಂದು ಕಬ್ಬಿಣದ ರಾಡು ಇನ್ನೂ ಆಕೆಯ ಖಾಸಗಿ ಅಂಗದೊಳಗೆ ಇತ್ತು ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಟ್ವೀಟ್ ಮಾಡಿದ್ದಾರೆ.

ಮಹಿಳೆ ಗಾಜಿಯಾಬಾದ್ ನಿಂದ ದೆಹಲಿಗೆ ಮರಳುತ್ತಿದ್ದರು. ಅವರ ಸಹೋದರ ಬಸ್ ನಿಲ್ದಾಣಕ್ಕೆ ಅವರನ್ನು ಬಿಟ್ಟು ಹೋಗಿದ್ದರು. ಮಹಿಳೆ ಬಸ್ ಗಾಗಿ ಕಾಯುತ್ತಿದ್ದಾಗ ಐವರು ವ್ಯಕ್ತಿಗಳು ಅವರನ್ನು ಕಾರಿನ ಒಳಗೆ ಎಳೆದುಕೊಂಡಿದ್ದರು. ಬಳಿಕ ಅಪರಿಚಿತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ನಡೆಸಿ, ಬಳಿಕ ಆರೋಪಿಗಳು ಮಹಿಳೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.

ಮಂಗಳವಾರ ಮುಂಜಾನೆ 3:30 ರ ವೇಳೆಗೆ ನಂದಗ್ರಾಮ್ ಪೊಲೀಸ್ ಠಾಣೆ ಬಳಿಯ ಆಶ್ರಮದ ರಸ್ತೆ ಬಳಿ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದಾರೆ. ಮಹಿಳೆ ನೆಲದ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿಗಳ ಮಧ್ಯೆ ಆಸ್ತಿ ವಿವಾದ ಇತ್ತು. ಅದು ನ್ಯಾಯಾಲಯದ ಮುಂದೆ ಇತ್ತು ಎಂದು ನಮಗೆ ತಿಳಿದುಬಂದಿದೆ. ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಗಾಜಿಯಾಬಾದ್ ಪೊಲೀಸ್ ವಕ್ತಾರ ನಿಪುಣ್ ಅಗರ್ವಾಲ್ ತಿಳಿಸಿದ್ದಾರೆ.