ಬೆಂಗಳೂರು : ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) 50 ಲಕ್ಷ ರೂ. ಅಪಘಾತ ವಿಮಾ ಯೋಜನೆ ಸೌಲಭ್ಯವನ್ನು ಸಿಬ್ಬಂದಿಗಾಗಿ ಜಾರಿಗೊಳಿಸಿದೆ.
ಇದುವರೆಗೂ ನಿಗಮದ ಸಿಬ್ಬಂದಿ ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ, ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯತೆಗೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಅವರ ಅವಲಂಬಿತರಿಗಾಗಲಿ ಅಥವಾ ಅವರಿಗಾಗಲಿ ಲಭಿಸುತ್ತಿರಲಿಲ್ಲ. ಇದೀಗ ಸಿಬ್ಬಂದಿ ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡಲು ದೊಡ್ಡ ಮೊತ್ತದ ಅಪಘಾತ ವಿಮಾ ಯೋಜನೆ ಜಾರಿಗೊಳಿಸಿದೆ.
ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕರು ಹಾಗೂ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಎಸ್ ಬಿಐನ ಡಿಜಿಎಂ ಪಂಕಜ್ ತಪ್ಲಿಯಾಲ್ ಸಹಿ ಹಾಕಿದರು.
ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ. ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ಲಕ್ಷ ರೂ. ಹ಼ಣ ಹಾಗೂ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ 10 ಲಕ್ಷ ರೂ. ವಿಮಾ ಪರಿಹಾರ ದೊರೆಯಲಿದೆ. ಕರ್ತವ್ಯನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
ಸಿಬ್ಬಂದಿ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ 10 ಲಕ್ಷ ರೂ., ಔಷಧಗಳ ಆಮದಿಗಾಗಿ ಗರಿಷ್ಟ 5 ಲಕ್ಷ ರೂ., ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ 2 ಲಕ್ಷ ರೂ. (50 ಲಕ್ಷ ರೂ. + 2 ಲಕ್ಷ ರೂ.), ಏರ್ ಅಂಬುಲೆನ್ಸ್ ಸೇವೆಗೆ 10 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುತ್ತದೆ. ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ 5 ಲಕ್ಷ ರೂ. ಹಾಗೂ ಹೆಣ್ಣುಮಗಳ ವಿವಾಹಕ್ಕೆ ಗರಿಷ್ಟ 5 ಲಕ್ಷ ರೂ. ವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿರುತ್ತದೆ.










