ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ಪಾಪಿ..!

70
firstsuddi

ಯಾದಗಿರಿ : ಮಹಿಳೆ ಮೇಲೆ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿರುವ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ ನಡೆದಿದೆ.

ಗಂಗಪ್ಪ ಎಂಬಾತ ಬೆಂಕಿ ಹಚ್ಚಿದ ಆರೋಪಿ. ಟ್ರಾಕ್ಟರ್ ಚಾಲಕನಾಗಿರುವ ಗಂಗಪ್ಪ, ನಿನ್ನೆ ತಡರಾತ್ರಿ ಬಾಲಮ್ಮಳ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಬಾಲಮ್ಮ ವಿರೋಧಿಸಿದ್ದಾರೆ. ಈ ಹಿನ್ನೆಲೆ ಕೋಪಗೊಂಡ ಗಂಗಪ್ಪ, ತನ್ನ ಬೈಕ್ ನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಬಂದು ಬಾಲಮ್ಮನ ಮೇಲೆ ಹಾಕಿ, ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಮಹಿಳೆಯ ದೇಹ ಸಂಪೂರ್ಣ ಸುಟ್ಟು ಹೋಗಿದ್ದು, ಸದ್ಯ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಿಳೆಯು ಪತಿಯೊಂದಿಗೆ ಚೌಡೇಶ್ವರಿ ಹಾಳ ಗ್ರಾಮದಲ್ಲಿ ವಾಸವಿದ್ದು, ಅದೇ ಊರಿನವನಾದ ಆರೋಪಿ ಗಂಗಪ್ಪ ಈಕೆಯ ಮೇಲೆ ಈ ಹಿಂದೆಯೂ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.

ಸುರಪುರ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಮಹಿಳೆಯಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.