ಮಹಿಷಾ ದಸರಾ ಆಚರಣೆಗೆ ಅನುಮತಿ- ಷರತ್ತು ಅನ್ವಯ…

93
firstsuddi

ಮೈಸೂರು: ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಮಹಿಷಾ ದಸರಾ ಆಚರಣೆಗೆ ಇದೀಗ ಷರತ್ತುಬದ್ಧ ಅನುಮತಿಯನ್ನು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೀಡಿದ್ದಾರೆ.

ಬಹಳ ದಿನಗಳಿಂದ ಮಹಿಷಾ ದಸರಾ ನಡೆಸಲು ಪರ-ವಿರೋಧ ನಡೆಯುತ್ತಲೇ ಇತ್ತು. ಒಂದೆಡೆ ದಲಿತ ಸಮಿತಿಗಳು ಹಾಗೂ ಮಹಿಷಾ ದಸರಾ ಸಮಿತಿಯವರು ನಡೆಸಬೇಕು ಎಂದರೆ, ಇತ್ತ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿದ್ದರು. ಈ ಹಿನ್ನಲೆ ಚಾಮುಂಡಿ ಬೆಟ್ಟ ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಪೊಲೀಸ್ ಕಮೀಷನರ್ ರಮೇಶ್.ಬಿ ಆದೇಶಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಅ.12ರಂದು ಮಧ್ಯರಾತ್ರಿ 12 ಗಂಟೆಯಿಂದ ಅ.14ರ ಬೆಳಗ್ಗೆ 06 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಯಾವುದೇ ಸಭೆ-ಸಮಾರಂಭ, ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ.

ಇನ್ನು ಮೈಸೂರಿನ ಟೌನ್​​ಹಾಲ್​ನಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡಲಾಗಿದೆ. ಆದರೆ, ವೇದಿಕೆ ಕಾರ್ಯಕ್ರಮಕ್ಕಷ್ಟೇ ಅವಕಾಶ ನೀಡಲಾಗಿದೆ. ಮೈಸೂರಿನಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಸಂಭ್ರಮಾಚರಣೆ ನಿಷೇಧವಾಗಿದೆ. ಜೊತೆಗೆ ಧಾರ್ಮಿಕ ಭಾವನೆ ಕೆಣಕುವ, ಪ್ರಚೋದನೆ ಭಾಷಣ ಮಾಡಬಾರದು ಹೀಗೆ ಇನ್ನಿತರ ನಿಬಂಧನೆಗಳನ್ವಯ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದರು.