ಬೆಂಗಳೂರು : ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಣಿಗಲ್ ಸಮೀಪದ ಮೆಳ್ಳೆಹಳ್ಳಿ ಗ್ರಾಮದ ನಿವಾಸಿ ರಮೇಶ್ ಅವರು 15 ವರ್ಷಗಳಿಂದ ಕೆಪಿಸಿಸಿ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಡಾ.ಜಿ ಪರಮೇಶ್ವರ್ ಅವರು ಡಿಸಿಎಂ ಆದ ಸಂದರ್ಭದಲ್ಲಿ ಪರಮೇಶ್ವರ್ ಅವರು ರಮೇಶ್ ಅವರನ್ನು ತಮ್ಮ ಬಳಿ ಆಪ್ತ ಸಹಾಯಕನಾಗಿ ಇಟ್ಟುಕೊಂಡಿದ್ದರು. ಅ.9ರಂದು ರಮೇಶ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ರಮೇಶ್ ಅವರನ್ನು ವಿಚಾರಣೆಯಿಂದ ಕೈಬಿಟ್ಟಿದ್ದರು. ಈ ವೇಳೆ ರಮೇಶ್ ಅವರು ತಮ್ಮ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ನನಗೆ ಐಟಿ ವಿಚಾರಣೆ ಎದುರಿಸಲು ಆಗುತ್ತಿಲ್ಲ. ನಾನು ಬಡವ, ಆದರೂ ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಸಿಕ್ಕಾಪಟ್ಟೆ ಪ್ರಶ್ನೆಯನ್ನು ಕೇಳುತ್ತಾರೆ. ನನಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.










