ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಬಿಜೆಪಿ ಸೇರ್ಪಡೆ…

60
firstsuddi

ಬೆಂಗಳೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ನಿನ್ನೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಉಪಸ್ಥಿತರಿದ್ದರು.

ಶಶಿಭೂಷಣ್ ಹೆಗಡೆ ಹಿಂದೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ಧಿಸಿ 3ನೇ ಸ್ಥಾನದಲ್ಲಿದ್ದರು. ಈ ಹಿಂದೆ 2004 ರಲ್ಲಿ ಕುಮಟಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 31,273 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಕೆ.ಶೆಟ್ಟಿ ವಿರುದ್ಧ 3,465 ಮತಗಳ ಅಂತರದಿಂದ ಸೋತರೇ, 2008 ರಲ್ಲಿ ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 30,201 ಮತ ಪಡೆದು ಅಂದಿನ ಜೆಡಿಎಸ್ ಅಭ್ಯರ್ಥಿ ದಿನಕರ್ ಶೆಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲು ಕಂಡು 3ನೇ ಸ್ಥಾನದಲ್ಲಿದ್ದರು. ಮೂರು ಸೋಲಿನ ನಂತರ ಜೆಡಿಎಸ್ ನಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದರು.

ಶಶಿಭೂಷಣ್ ಹೆಗಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಬದಲಾಗಿ ಪಕ್ಷದ ಕೆಲಸದಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗುತ್ತಿದೆ.