ಬೆಂಗಳೂರು : ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಆರೋಪಿಯಾದ ರೌಡಿಶೀಟರ್ ಚಲ್ಲಘಟ್ಟ ಲೋಹಿತ್ ಅಲಿಯಾಸ್ ರೋಹಿತ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಪಿಎಸ್ಐ ಅಮರೇಶ್ ಜೇಗರಕಲ್ ಅವರು ರೌಡಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಲಾಗಿತ್ತು. ಆದರೂ ರೋಹಿತ್ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಮಾಹಿತಿ ನೀಡಿದ್ದು, ಆರೋಪಿ ಲೋಹಿತ್ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ತಲೆ ಮರೆಸಿಕೊಂಡಿದ್ದ. ಆರೋಪಿ ಪತ್ತೆಗೆ ಹಲಸೂರು ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಇಂದು ಆರೋಪಿ ಜೀವನ್ ಭೀಮಾನಗರ ಕಡೆಗೆ ಬರುವ ಮಾಹಿತಿ ಸಿಕ್ಕಿತ್ತು. ಬೆಳಗ್ಗೆ ಪೊಲೀಸರು ಆತನ ಬೆನ್ನತ್ತಿ ಬಂಧಿಸಲು ಹೋಗಿದ್ರು. ಆ ವೇಳೆ ಕಾನ್ಸ್ಟೇಬಲ್ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ. ಆಗ ಆರೋಪಿ ಕಾಲಿಗೆ ಸಬ್ ಇನ್ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ. ಆರೋಪಿ ಬಳಿ ಒಂದು ಇನ್ನೋವಾ ಕಾರು ಸಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ 17 ಕಡೆ ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶದಲ್ಲೂ ಇವನ ಮೇಲೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










