ಮಿಲಿಟರಿ ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಫ್ಘಾನಿಸ್ತಾನ್ ಮಹಿಳೆ!

74
firstsuddi

ವಾಷಿಂಗ್ಟನ್ : ಅಫ್ಘಾನಿಸ್ತಾನದ ಕಾಬೂಲ್ ನಿಂದ ಜರ್ಮನಿಯ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಹಾರಿದ ವಾಯುಪಡೆಯ ಸಿ-17 ವಿಮಾನದಲ್ಲಿ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಅಮೆರಿಕ ಮಿಲಿಟರಿ ತಿಳಿಸಿದೆ.

ಈ ವಿಚಾರದ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಮಿಲಿಟರಿಯ ಏರ್ ಮೊಬಿಲಿಟಿ ಕಮಾಂಡ್, ಕಾಬೂಲ್ ನಿಂದ ಜರ್ಮನಿಗೆ ಹೊರಟಿದ್ದ ವಿಮಾನದಲ್ಲಿ ಶನಿವಾರದಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ವಾಯು ಒತ್ತಡವನ್ನು ಮತ್ತಷ್ಟು ಹೆಚ್ಚು ಮಾಡುವ ಸಲುವಾಗಿ ವಿಮಾನ ಹಾರಾಟದ ಎತ್ತರವನ್ನು ಹೆಚ್ಚಿಸಲು ವಿಮಾನದ ಕಮಾಂಡರ್ ತಿಳಿಸಿದ್ದರು. ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಬರುತ್ತಿದ್ದಂತೆಯೇ, ಅಮೆರಿಕದ ವೈದ್ಯಕೀಯ ಸಿಬ್ಬಂದಿ ಗರ್ಭಿಣಿಗೆ ವಿಮಾನದಲ್ಲೇ ಚಿಕಿತ್ಸೆ ಆರಂಭಿಸಿದರು. ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೇ ಹೆರಿಗೆ ಆಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣವೇ ತಾಯಿ ಮತ್ತು ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು ಇದೀಗ ತಾಯಿ, ಮಗೂ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.