ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕನ್ ಸುಂದರಿ ಆಂಡ್ರಿಯಾ ಮೆಜಾ!

118
firstsuddi

ಫ್ಲೋರಿಡಾ : ಮೆಕ್ಸಿಕೋದ ಆ್ಯಂಡ್ರಿಯಾ ಮೆಜಾ(26) ಅವರು 69ನೇ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಮೆರಿಕಾದ ಫ್ಲೋರಿಡಾದಲ್ಲಿ ನಿನ್ನೆ ನಡೆದ ಮಿಸ್ ಯೂನಿವರ್ಸ್ ಅಂತಿಮ ಸುತ್ತಿನ ಆಯ್ಕೆಯಲ್ಲಿ ಆಂಡ್ರಿಯಾ ಮೆಜಾ ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ, ಬ್ರೆಜಿಲ್ ನ ಜೂಲಿಯ ಗಾಮಾ ಮೊದಲ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಆಪ್ ಆಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ 22 ವರ್ಷದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಅವರು ಮೂರನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಈ ಬಾರಿ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದರು.

ಮಿಸ್ ಯೂನಿವರ್ಸ್ ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಆ್ಯಂಡ್ರಿಯಾ ಮೆಜಾ ಅವರಿಗೆ ಕೊರೊನಾ ಸಂಬಂಧಿತ ಪ್ರಶ್ನೆ ಕೇಳಲಾಯಿತು. ಒಂದು ವೇಳೆ ನೀವು ನಿಮ್ಮ ದೇಶದ ಲೀಡರ್? ಆಗಿದ್ದರೆ, ಈ ಕೊವಿಡ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ರಿ? ಎಂಬ ಪ್ರಶ್ನೆಗೆ ದಿಟ್ಟತನದಿಂದ ಉತ್ತರಿಸಿದ ಆ್ಯಂಡ್ರಿಯಾ ಮೆಜಾ ಅವರು, ಕೊರೊನಾ ನಿಯಂತ್ರಿಸಲು ನಿರ್ದಿಷ್ಟವಾದ ಕ್ರಮ ಯಾವುದೂ ಇಲ್ಲದ ಕಾರಣ, ಪರಿಸ್ಥಿತಿ ಕೈ ಮೀರುವ ಮೊದಲೇ ನಾನು ಲಾಕ್ ಡೌನ್ ಮಾಡಿಸುತ್ತಿದ್ದೆ. ಯಾಕೆಂದರೆ ಈಗಾಗಲೇ ನಾವು ಅನೇಕ ಜೀವಗಳನ್ನು ಕಳೆದುಕೊಂಡಿದ್ದೇವೆ. ಅದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಜನರ ಕಾಳಜಿಯನ್ನು ನಾವು ಮಾಡಬೇಕು. ಆರಂಭದಲ್ಲೇ ಲಾಕ್ ಡೌನ್ ಮಾಡುವ ಮೂಲಕ ಜನರ ರಕ್ಷಣೆ ಮಾಡುತ್ತಿದ್ದೆ ಎಂದು ಉತ್ತರಿಸಿ ಎಲ್ಲರ ಚಪ್ಪಾಳೆಯನ್ನು ಪಡೆದುಕೊಂಡರು.