ಮುಂದಿನ ಚುನಾವಣೆಗೆ ನೇತೃತ್ವ ಯಾರದ್ದು, ಯಾರು ಸಾರಥಿ ಎಂಬ ನಿರ್ಣಯ ಹೈಕಮಾಂಡ್ ಮಾಡಲಿದೆ: ಸಚಿವ ಸತೀಶ ಜಾರಕಿಹೊಳಿ.

41

ಧಾರವಾಡ: ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸುವ ವಿಚಾರದ ತೀರ್ಮಾನ ದೆಹಲಿಯವರು ಮಾಡುತ್ತಾರೆ. ಯಾರ ನೇತೃತ್ವ, ಯಾರು ಸಾರಥಿ ಅಂತಾ ನಿರ್ಣಯ ದೆಹಲಿಯವರೇ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಜಾರಕಿಹೊಳಿ, ಬಿಜೆಪಿಯವರು ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ದರು. ದೆಹಲಿಯಲ್ಲಿ ಅವರೇ ಈಗ ಕೊಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಕೊಟ್ಟಿದಾರೆ. ಈ ಬಗ್ಗೆ ಪ್ರಹ್ಲಾದ್ ಜೋಶಿಯವರನ್ನೇ ಕೇಳಬೇಕು. ದೆಹಲಿಯಲ್ಲಿ ನಮಗಿಂತ 500 ಜಾಸ್ತಿ ಮಾಡಿದ್ದಾರೆ. ರಾಜಕೀಯಕ್ಕಾಗಿ ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ಇದು ಒಳ್ಳೆಯ ಯೋಜನೆ ಅದಕ್ಕಾಗಿ ಅವರೂ ಕೊಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಡಿ.ಕೆ ಶಿವಕುಮಾರ್ ಮುಂದಿನ 10 ವರ್ಷ ನಾನೇ ನಾಯಕ ಎಂದಿರುವ ವಿಚಾರಕ್ಕೆ ಮಾತನಾಡಿ, ಅದನ್ನು ಹೈಕಮಾಂಡ್ ನಿರ್ಣಯ ಮಾಡುತ್ತದೆ. ನಿರ್ಧಾರ ಮಾಡುವ ಮಾಲೀಕರು ಯಾರು?.. ನಮ್ಮ ಮಾಲೀಕರು ದೆಹಲಿಯಲ್ಲಿ ಇದ್ದಾರೆ ಎಂದು ಹೇಳಿದರು. ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆಗೆ ಪ್ರತಿಕ್ರಿಯಿಸಿ, ಅದು ನಮಗೆ ಗೊತ್ತಿಲ್ಲ ಆ ಬಗ್ಗೆ ದೆಹಲಿಯವರನ್ನೇ ಕೇಳಬೇಕು. ಸದ್ಯ ದಲಿತ ಸಿಎಂ ಪ್ರಶ್ನೆ ಇಲ್ಲ. ಜಾರಕಿಹೊಳಿ ಮುಖ್ಯಮಂತ್ರಿ ಎಂಬ ಚರ್ಚೆ ವಿಚಾರ ಅದು ನಮ್ಮ ಅಭಿಮಾನಿಗಳು ಹೇಳುತ್ತಾರೆ. ನಮ್ಮ ಅಭಿಮಾನಿಗಳಿಗೆ ನಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಎಲ್ಲರಿಗೂ ಅಭಿಮಾನಿಗಳಿದ್ದಾರೆ. ಅವರವರ ಅಭಿಮಾನಿ ತನ್ನ ನಾಯಕರೇ ಮುಖ್ಯಮಂತ್ರಿ ಆಗಲಿ ಅನ್ನುತ್ತಾರೆ ಎಂದು ಉತ್ತರಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು, ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಆಕಾಂಕ್ಷಿ ಬಹಳ ಜನ ಇದ್ದಾರೆ. ಆದರೆ, ಸಂಪುಟ ವಿಸ್ತರಣೆ ಯಾವಾಗ ಅನ್ನೋದು ಗೊತ್ತಿಲ್ಲ. ಇವತ್ತು ಶಾಸಕ ಕೋನರಡ್ಡಿ ಬರ್ತಡೇ ಇದೆ. ಬರ್ತಡೇ ಜತೆ ವಿವಿಧ ಇಲಾಖೆಗಳ ಯೋಜನೆಗಳ ಪೂಜೆ ಆಗಿದೆ. ಇವತ್ತಿನಿಂದ ಅನೇಕ ಕಾಮಗಾರಿಗಳನ್ನು ಪ್ರಾರಂಭಿಸುತ್ತಿದ್ದಾರೆ. ನಮ್ಮ ಇಲಾಖೆ ಕಾಮಗಾರಿಗಳೂ ಇವೆ. ಈ ಭಾಗದ ಜನರ ಬಹು ದಿನಗಳ ರಸ್ತೆ ಬೇಡಿಕೆ ಇದ್ದವು ಅದೆಲ್ಲವೂ ಈಡೇರುತ್ತಿವೆ. ಸರ್ಕಾರದ ಎಲ್ಲ ಯೋಜನೆ ಈ ಭಾಗಕ್ಕೆ ತರುವ ಪ್ರಯತ್ನ ಕೋನರಡ್ಡಿ ಮಾಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ನಾನೂ ಬಂದಿದ್ದೇನೆ. ಈಗಾಗಲೇ 47 ಕೋಟಿ ನವಲಗುಂದ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಇಷ್ಟಕ್ಕೆ ಸಮಸ್ಯೆ ಪರಿಹಾರ ಆಗಿಲ್ಲ. ಇನ್ನೂ ಬಹಳಷ್ಟು ಬೇಡಿಕೆ ಇವೆ ಮುಂದಿನ 3 ವರ್ಷದಲ್ಲಿ ಹಂತ ಹಂತವಾಗಿ ಈಡೇರಿಸುತ್ತೇವೆ ಎಂದು ಜಾರಕಿಹೊಳಿ ಭರವಸೆ ನೀಡಿದರು.