ಜೈಪುರ: ರಾಜಸ್ತಾನದಲ್ಲಿ ನಡೆದ ಬೋರ್ವೆಲ್ ದುರಂತ ಸಂಭವಿಸಿ 7 ದಿನಗಳೇ ಕಳೆದರೂ ಕಾರ್ಯಾಚರಣೆ ಮಾತ್ರ ಇನ್ನೂ ಮುಕ್ತಾಯವಾಗಿಲ್ಲ. ಮಗು ಜೀವಂತವಾಗಿರುವ ಆಸೆ ದಿನೇ ದಿನೇ ಕಡಿಮೆಯಾಗುತ್ತಿದೆ. ರಾಜಸ್ತಾನದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ ಮೂರು ವರ್ಷದ ಚೇತನಾ ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟವನ್ನು ನಡೆಸುತ್ತಿದ್ದಾಳೆ. ನೀರಿಲ್ಲದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೇ ಬಿಡಲಾಗಿತ್ತು. ಇದರ ಪಕ್ಕ ಹುಲ್ಲುಗಳು, ಗಿಡಗಳು ಬೆಳೆದು ಕೊಳವೆ ಬಾವಿಯ ಯಾವುದೇ ಗುರುತು ಇಲ್ಲದಂತಾಗಿತ್ತು. ಇದೇ ಕೊಳವೆ ಬಾವಿ ಪಕ್ಕದಲ್ಲಿ ಮಗು ತನ್ನ ತಂದೆ ಜೊತೆ ಆಟವಾಡುತ್ತಿರುವಾಗ ಬಿದ್ದಿದ್ದಾಳೆ. ಈ ಘಟನೆ ಸಂಭವಿಸಿ ಬರೋಬ್ಬರಿ 7 ದಿನಗಳೇ ಕಳೆದರೂ ಇನ್ನೂ ಕೂಡ ಬಾಲಕಿಯನ್ನು ಕೊಳವೆಬಾವಿಯಿಂದ ಹೊರತೆಗೆಯುವ ಕಾರ್ಯಾಚರಣೆ ಇನ್ನೂ ಆಗಿಲ್ಲ. ಬಾಲಕಿಯನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಎಲ್ಲಾ ಸಂಭಾವ್ಯ ಆಯ್ಕೆಗಳನ್ನು ಪ್ರಸ್ತುತ ಅನ್ವೇಷಿಸಲಾಗುತ್ತಿದೆ ಮತ್ತು ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಕೋಟ್‍ಪುಟ್ಲಿ-ಬೆಹ್ರೋರ್ ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ಅವರು ಈ ಬಗ್ಗೆ ಮಾತನಾಡಿ, ಸುರಂಗ ಮಾರ್ಗದ ಕಲ್ಲಿನ ಭೂಪ್ರದೇಶದಿಂದಾಗಿ ಹುಡುಗಿಯನ್ನು ತಲುಪಲು ಸುರಂಗ ನಿರ್ಮಾಣವು ಹೆಚ್ಚಿನ ಸವಾಲುಗಳನ್ನು ಎದುರಿಸುವಂತಾಗಿದೆ. ಹೆಚ್ಚುವರಿಯಾಗಿ, ಸುರಂಗದ ಮೇಲ್ಭಾಗ ಮತ್ತು ಕೆಳಭಾಗದ ನಡುವಿನ ಗಮನಾರ್ಹ ತಾಪಮಾನ ವ್ಯತ್ಯಾಸವು ತೊಂದರೆಗಳನ್ನುಂಟುಮಾಡುತ್ತಿದೆ. ನಾವು ಸುರಂಗವನ್ನು ನಿರ್ಮಿಸುತ್ತಿದ್ದೇವೆ. ಸುರಂಗ ಮಾರ್ಗವು ಕಲ್ಲಿನಿಂದ ಕೂಡಿರುವುದರಿಂದ ಅದನ್ನು ಕೊರೆಯುವುದು ದೊಡ್ಡ ಸವಾಲಾಗಿದೆ. ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತಾಪಮಾನದಲ್ಲಿ ಭಾರಿ ವ್ಯತ್ಯಾಸವಿದೆ. ಎಲ್ಲಾ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಮತ್ತು ಚರ್ಚಿಸಲಾಗುತ್ತಿದೆ. ಅತ್ಯುತ್ತಮ ಉಪಕರಣಗಳು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಹೀಗಾಗಿ ಮಗು ಜೀವಂತವಾಗಿರುವ ಆಸೆ ದಿನೇ ದಿನೇ ಕರಗುತ್ತಿದೆ ಎಂದು ತಿಳಿಸಲಾಗಿದೆ.










