ಮುಡಾದ ಹಿಂದಿನ ಆಯುಕ್ತರಾದ ದಿನೇಶ್ ಕುಮಾರ್ ಹಾಗೂ ನಟೇಶ್ ಅವರನ್ನು ಬಂಧಿಸಿ: ಸ್ನೇಹಮಯಿ ಕೃಷ್ಣ.

27

ಮೈಸೂರು: ಅಕ್ರಮವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಇಬ್ಬರು ಆಯುಕ್ತರು ಬೇಕಾಬಿಟ್ಟಿಯಾಗಿ ನಿವೇಶನ ಹಂಚಿದ್ದಾರೆ. ಕೂಡಲೇ ಆ ಇಬ್ಬರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ. ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಡಾದ ಹಿಂದಿನ ಆಯುಕ್ತರಾದ ದಿನೇಶ್ ಕುಮಾರ್ ಹಾಗೂ ನಟೇಶ್ ಅವರು 50:50 ಅನುಪಾತದಲ್ಲಿ ಅಕ್ರಮವಾಗಿ 928 ಸೈಟ್‍ಗಳನ್ನು ತಮಗೆ ಬೇಕಾದವರಿಗೆ ಹಂಚಿ ಲಾಭ ಪಡೆದಿದ್ದಾರೆ. ಜತೆಗೆ ಬಿಲ್ಡರ್ ಮಂಜುನಾಥ್, ಸಚಿವ ಮಹದೇವಪ್ಪ ಅಣ್ಣನ ಮಗ ನವೀನ್ ಬೋಸ್ ಹಾಗೂ ರಾಕೇಶ್ ಪಾಪಣ್ಣ ಸೇರಿದಂತೆ ಹಲವರಿಗೆ 50:50 ಅನುಪಾತದ ಆಧಾರದಲ್ಲಿ ಅಕ್ರಮವಾಗಿ ಸೈಟ್‍ಗಳನ್ನು ಹಂಚಲಾಗಿದೆ ಎಂದು ದೂರಿದರು.
ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಬೇಕು ಹಾಗೂ ಸಿದ್ದರಾಮಯ್ಯ ಪತ್ನಿ ಜಮೀನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸರ್ವೆ ನಂಬರ್ 464ರ 3.16 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಹೇಳುವ ದಾಖಲೆಗಳ ನೈಜತೆ ಬಗ್ಗೆ ವೈಜ್ಞಾನಿಕ ವರದಿ ಪಡೆದುಕೊಂಡು ತನಿಖೆ ನಡೆಸಬೇಕು. ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸುವವರನ್ನು ಬಂಧಿಸಬೇಕು ಎಂದು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.