ಮುಡಾ ಪ್ರಕರಣ ಸಂಬಂಧಿಸಿದಂತೆ ಮನವಿ ಪತ್ರದಲ್ಲಿ ವೈಟ್ನರ್ ಹಾಕಿದ್ದನ್ನ ಒಪ್ಪಿಕೊಂಡ ಸಿಎಂ ಪತ್ನಿ ಪಾರ್ವತಿ.

31

ಮೈಸೂರು: ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಂದ ಮೂರು ಗಂಟೆಗಳ ಕಾಲ ವಿಚಾರಣೆಗೊಳಗಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಪತ್ರಕ್ಕೆ ವೈಟ್ನರ್ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ಇಂದು ತಿಳಿಸಿವೆ.ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಎರಡನೇ ಆರೋಪಿಯಾಗಿದ್ದಾರೆ.
ತನಿಖೆ ವೇಳೆ ಪರಿಹಾರದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಡಾಕ್ಕೆ ಸಲ್ಲಿಸಿದ್ದ ಮನವಿ ಪತ್ರಕ್ಕೆ ವೈಟ್ನರ್ ಹಾಕಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ವಾಕ್ಯದಲ್ಲಿ ತಪ್ಪಿದ್ದ ಕಾರಣಕ್ಕೆ ವೈಟ್ನರ್ ಬಳಸಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ. ತಪ್ಪು ಏನು ಎಂದು ತನಗೆ ನಿಖರವಾಗಿ ನೆನಪಿಲ್ಲ ಎಂದು ಸಿ.ಎಂ.ಪತ್ನಿ ಹೇಳಿದ್ದಾರೆ. ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿರುವುದನ್ನು ಮರೆಮಾಚಲು ಮುಡಾ ಪ್ರಕರಣ ಬೆಳಕಿಗೆ ಬಂದ ನಂತರ ಮನವಿ ಪತ್ರಕ್ಕೆ ವೈಟ್ನರ್ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಸಿ.ಎಂ.ಪತ್ನಿ ಪಾರ್ವತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ಸಂಜೆ ನೋಟಿಸ್ ನೀಡಲಾಗಿತ್ತು. ಕುಟುಂಬದ ಸ್ನೇಹಿತರ ಜತೆಗೂಡಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು. ಪರಿಹಾರಕ್ಕಾಗಿ ಮುಡಾಕ್ಕೆ ಎಷ್ಟು ಮನವಿ ಪತ್ರಗಳನ್ನು ಸಲ್ಲಿಸಿದ್ದೀರಿ ಎಂಬ ಬಗ್ಗೆಯೂ ಪಾರ್ವತಿ ಅವರನ್ನು ಕೇಳಲಾಯಿತು. ಐದರಿಂದ ಆರು ಪತ್ರಗಳನ್ನು ನೀಡಲಾಗಿದೆ ಮತ್ತು ನಿಖರವಾದ ಸಂಖ್ಯೆಗಳು ತಿಳಿದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ತಾನು ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ನಿವೇಶನ ಕೇಳಿಲ್ಲ. ಈ ಜಮೀನು ನನ್ನ ಮದುವೆಯ ಸಮಯದಲ್ಲಿ ನನ್ನ ತವರು ಮನೆಯ ಕಡೆಯಿಂದ ಉಡುಗೊರೆಯಾಗಿ ಬಂದಿದ್ದು, ತನ್ನ ಜಮೀನು ಸ್ವಾಧೀನಪಡಿಸಿಕೊಂಡಿದ್ದರಿಂದ ಪರಿಹಾರ ನಿವೇಶನಕ್ಕೆ ಮನವಿ ಮಾಡಿದ್ದಾಗಿ ಅವರು ಲೋಕಾಯುಕ್ತಕ್ಕೆ ತಿಳಿಸಿದ್ದಾರೆ.