ಬೆಂಗಳೂರು: ಮುಡಾ ಹಗರಣ ಮಹತ್ತರ ತಿರುವು ಪಡೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದರರ್ಥ ಮುಖ್ಯಮಂತ್ರಿ ಅವರು ಕುಟುಂಬಕ್ಕೆ 14 ಸೈಟು ಪಡೆದುಕೊಂಡಿದ್ದಾರೆ. ಮುಡಾಗೆ ಕೋಟಿ ಕೋಟಿ ನಷ್ಟ ಆಗಿದೆ. ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದಲೂ ಭಾರಿ ನಷ್ಟ ಆಗಿದೆ ಎಂದು ತಿಳಿಸಿದರು. ಆರ್‍ಟಿಐ ಕಾರ್ಯಕರ್ತ ಹಾಗೂ ಮುಡಾ ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಹಿ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ವಿಜಯೇಂದ್ರ ಅವರು, ಸ್ನೇಹಮಯಿ ಕೃಷ್ಣಾ ಅವರ ಮೇಲೆಯೇ ಸರ್ಕಾರ ಆರೋಪ ಮಾಡಿ ಅವರನ್ನು ಬಂಧಿಸಲು ಹೋಗಿತ್ತು. ಇಡಿ ಮುಟ್ಟುಗೋಲು ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಆರೋಪಿ ಸ್ಥಾನದಲ್ಲಿ ಮತ್ತೆ ನಿಲ್ಲುವಂತಾಗಿದೆ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.










