ಬೆಂಗಳೂರು: ಸಿಎಂ ವಿರುದ್ಧದ ಮುಡಾ ಹಗರಣಕ್ಕೆ ಬಹುದೊಡ್ಡ ತಿರುವು ಸಿಗುವ ಎಲ್ಲ ಲಕ್ಷಣಗಳು ಕಾಣ್ತಿವೆ. ಸಿಎಂ ಕುರ್ಚಿಗೆ ಕುತ್ತು ತಂದಿರುವ ಸೈಟ್‍ಗಳನ್ನ ಸಿಎಂ ಪತ್ನಿ ವಾಪಸ್ ನೀಡುವುದಾಗಿ ಮುಡಾಗೆ ಪತ್ರ ಬರೆದಿದ್ದಾರೆ. ಮುಡಾ ಕಮಿಷನರ್‌ಗೆ ಗೆ ಪತ್ರ ಬರೆದಿರುವ ಸಿಎಂ ಪತ್ನಿ ಪಾರ್ವತಿ ಅವ್ರು 14 ಸೈಟ್‍ಗಳನ್ನ ವಾಪಸ್ ಮಾಡುತ್ತೇನೆ ಅಂತ ಹೇಳಿದ್ದಾರೆ.
ಭಾವನಾತ್ಮಕವಾಗಿ ಪತ್ರ ಬರೆದಿರುವ ಅವರು, ಅರಿಶಿನ ಕುಂಕುಮದ ಭಾಗವಾಗಿ ನನ್ನ ಅಣ್ಣ ನನಗೆ ಜಮೀನು ಕೊಟ್ಟಿದ್ದರು. ಕೆಸರೆ ಗ್ರಾಮದ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಮುಡಾ ವಶಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮೈಸೂರಿನ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನಗಳನ್ನು ಮಂಜೂರು ಮಾಡಿತ್ತು. ಈ ಸೈಟ್‍ಗಳನ್ನ ನಾನು ಹಿಂದಿರುಗಿಸಲು ನಿರ್ಧಾರ ಮಾಡಿದ್ದೇನೆ. ನನ್ನ ಪತಿಯ ಮುಂದೆ ಈ ಎಲ್ಲ ಸೈಟ್‍ಗಳು ತೃಣಕ್ಕೆ ಸಮಾನ ಅಂತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ನಡುವೆ ಪತ್ನಿ ಪಾರ್ವತಿ ಅವರು ಮುಡಾ ಸೈಟ್ ವಾಪಾಸ್ ಕೊಡಲು ಬರೆದ ಪತ್ರಕ್ಕೆ ಸಿಎಂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನನ್ನ ಪತ್ನಿಯ ನಿರ್ಧಾರ ಆಶ್ಚರ್ಯ ತಂದಿದೆ ಎಂದಿರುವ ಸಿಎಂ, ನನ್ನ ಪತ್ನಿ ನಿರ್ಧಾರವನ್ನ ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡುತ್ತೇನೆ ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯಗೆ ಇ.ಡಿಟೆನ್ಷನ್ ಸ್ಟಾರ್ಟ್ ಆಗಿದೆ. ಸ್ನೇಹಮಯಿ ಕೃಷ್ಣ ದೂರು ಆಧರಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ECIR ದಾಖಲು ಮಾಡಿಕೊಳ್ಳಲಾಗಿದೆ. ಇದರ ನಡುವೆ ಕಾಂಗ್ರೆಸ್‍ನಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಡಿ.ಕೆ ಶಿವಕುಮಾರ್, ಪರಮೇಶ್ವರ್ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಇ.ಡಿ ಅಖಾಡಕ್ಕೆ ಇಳಿಯುವ ಮುನ್ನವೇ ಮುಖ್ಯಮಂತ್ರಿ ಹುದ್ದೆ ಬಗ್ಗೆ ಕಾಂಗ್ರೆಸ್‍ನಲ್ಲಿ ಕಸರತ್ತು ಆರಂಭ ಆಗಿದೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಸಂದರ್ಭ ಬಂದರೂ ಬರಬಹುದು ಅನ್ನೋ ಚರ್ಚೆಗಳು ಹುಟ್ಟಿಕೊಂಡಿವೆ. ಸಿಎಂ ಬದಲಾದ್ರೆ ಹೊಸ ಸಿಎಂ ಯಾರು..? ಅನ್ನೋ ಚರ್ಚೆ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಹೋಂ ಮಿನಿಸ್ಟರ್ ಮನೆಗೆ ಭೇಟಿ ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ಬರೋಬ್ಬರಿ ಒಂದು ಗಂಟೆ ಕಾಲ ಬ್ರೇಕ್‍ಫಾಸ್ಟ್ ಮೀಟಿಂಗ್ ಮಾಡಿದ್ದರು. ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿರುವ ಇಬ್ಬರು ನಾಯಕರ ಮಾತುಕತೆ ರಾಜಕಾರಣ ಅಲ್ಲದೆ ಬೇರೇನು ಅಲ್ಲ ಎನ್ನಲಾಗ್ತಿದೆ. ಆದರೂ ನಾಯಕರು ಮಾತ್ರ ರಾಜಕೀಯ ಚರ್ಚೆ ಅಲ್ಲ, ಅಭಿವೃದ್ಧಿ ಚರ್ಚೆ ಎಂದಿದ್ದಾರೆ.
ಇಡಿ ದೂರು ದಾಖಲಿಸಿಕೊಳ್ಳುವ ಮುನ್ಸೂಚನೆ ಅರಿತೇ ಸಿಎಂ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದರು ಎನ್ನಲಾಗ್ತಿದೆ. ಭ್ರಷ್ಟಾಚಾರ ಕೇಸ್‍ನಲ್ಲಿ ಸಿಬಿಐ ತನಿಖೆಗೆ ನೇರವಾಗಿ ಬರುವುದನ್ನು ಸಂಪುಟದ ಮೂಲಕ ತಡೆದಿದ್ದ ಸಿದ್ದರಾಮಯ್ಯ PMLA ಆಕ್ಟ್ ಅಡಿ ತನಿಖೆ ಎದುರಿಸುವಂತಾಗಿದೆ. ಇಂದು ಪ್ರಕರಣ ದಾಖಲಾಗಿದ್ದು, ಒಂದೆರಡು ದಿನದಲ್ಲಿ ವಿಚಾರಣೆ ಶುರುವಾಗಲಿದೆ.










