ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ಗಣ್ಯರ ಸಂತಾಪ…

51
firstsuddi

ನವದೆಹಲಿ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರ ನಿಧನವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸಾಮಾನ್ಯ ಪರಿಸರದಿಂದ ಬಂದ ಮುಲಾಯಂ ಸಿಂಗ್ ಯಾದವ್ ಜಿಯವರ ಸಾಧನೆಗಳು ಅಸಾಧಾರಣವಾದವು. ಎಲ್ಲ ಪಕ್ಷಗಳ ಜನರೂ ಅವರನ್ನು ಗೌರವಿಸುತ್ತಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಆಳವಾದ ಸಂತಾಪ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, ಮುಲಾಯಂ ಸಿಂಗ್ ಯಾದವ್ ಅವರು ಗಮನಾರ್ಹ ವ್ಯಕ್ತಿತ್ವ ಹೊಂದಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದ ಅವರು ವಿನಮ್ರ ಮತ್ತು ಉತ್ತಮ ನಾಯಕರಾಗಿ ಪ್ರಶಂಸಿಸಲ್ಪಟ್ಟರು. ಅವರು ಶ್ರದ್ಧೆಯಿಂದ ಜನರ ಸೇವೆ ಸಲ್ಲಿಸಿದರು ಮತ್ತು ಲೋಕನಾಯಕ್ ಜೆಪಿ ಮತ್ತು ಡಾ. ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದಿದ್ದಾರೆ.

ರಾಜಕೀಯದಲ್ಲಿ ಹಗೆತನವಿದ್ದರೂ, ಮುಲಾಯಂ ಸಿಂಗ್ ಅವರು ಉತ್ತಮ ಸಂಬಂಧವನ್ನು ಹೊಂದಿದ್ದರು. ಅವರನ್ನು ಭೇಟಿಯಾದಾಗಲೆಲ್ಲ ಹಲವು ವಿಷಯಗಳ ಬಗ್ಗೆ ಬಹಳ ಮುಕ್ತ ಮನಸ್ಸಿನಿಂದ ಮಾತನಾಡುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಅವರೊಂದಿಗಿನ ಸಂವಾದಗಳು ನನ್ನ ನೆನಪಿನಲ್ಲಿ ಸದಾ ತಾಜಾವಾಗಿರುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ ಎಂದು ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ, ಮಾಜಿ ಕೇಂದ್ರ ಸಚಿವರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಜಿ ಅವರ ನಿಧನದ ಬಗ್ಗೆ ತೀವ್ರ ದುಃಖವಾಗಿದೆ. ಅವರ ನಿಧನದಿಂದ ರಾಷ್ಟ್ರ ರಾಜಕಾರಣಕ್ಕೆ ನಷ್ಟವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳು. ಓಂ ಶಾಂತಿ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದು, ಸಮಾಜವಾದಿ ಪಕ್ಷದ ವರಿಷ್ಠರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಮುಲಾಯಂ ಸಿಂಗ್ ಯಾದವ್ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಟ್ವೀಟ್ ಮಾಡಿದ್ದಾರೆ.