ಕಾಸರಗೋಡು : ಕರುನಾಡು ಮತ್ತು ಕೇರಳದ ಗಡಿಯಲ್ಲಿರುವ ಕುಂಬಳೆಯ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲದ ಆಕರ್ಷಣೆಯಾದ ಬಬಿಯಾ ಮೊಸಳೆ ನಿಧನವಾಗಿದೆ.
ದೇವಾಲಯದ ಕೊಳದಲ್ಲಿರುವ ಬಬಿಯಾ ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ. ಮೊಸಳೆ ಸುಮಾರು 70 ವರ್ಷಗಳಿಂದ ಇದೇ ಕೊಳದಲ್ಲಿದೆ ಎಂಬ ನಂಬಿಕೆ ಇದೆ. ದೇವರಿಗೆ ಅರ್ಪಿಸಿದ ನೈವೇದ್ಯವನ್ನೇ ತಿಂದು ಬಬಿಯಾ ಜೀವಿಸುತ್ತಿತ್ತು.
ಅನಂತಪದ್ಮನಾಭ ದೇಗುಲದ ಭಕ್ತರಿಗೂ ಈ ಬಬಿಯಾ ಕಂಡರೆ ವಿಶೇಷ ಪ್ರೀತಿ, ಗೌರವ ಮತ್ತು ಭಕ್ತಿ. ದೇವಾಲಯದ ರಕ್ಷಣೆಗಾಗಿ ದೇವರು ನೇಮಿಸಿದ ರಕ್ಷಕ ಬಬಿಯಾ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.
ಶ್ರೀ ಅನಂತಪುರಂ ದೇವಸ್ಥಾನದ ದೇವರ ಮೊಸಳೆ ಬಬಿಯಾ ವಿಷ್ಣು ಪಾದಕ್ಕೆ ಸೇರಿದೆ. ದೈವಿಕ ಮೊಸಳೆಯು ಶ್ರೀ ಅನಂತಪದ್ಮನಾಭ ಸ್ವಾಮಿಯ ಅನ್ನ ಮತ್ತು ಬೆಲ್ಲದ ಪ್ರಸಾದವನ್ನು ಸೇವಿಸಿ 70ಕ್ಕೂ ಹೆಚ್ಚು ವರ್ಷಗಳ ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು ಮತ್ತು ದೇವಾಲಯವನ್ನು ಕಾಪಾಡುತ್ತಿತ್ತು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಂಬನಿ ಮಿಡಿದು ಟ್ವೀಟ್ ಮಾಡಿದ್ದಾರೆ.










