ಮುಸ್ಲಿಂ ವಿದ್ಯಾರ್ಥಿಗೆ ಶಾಲೆಯ ಇತರ ವಿದ್ಯಾರ್ಥಿಗಳಿಂದ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ- ವೀಡಿಯೋ ವೈರಲ್…

77
firstsuddi

ಲಕ್ನೋ: ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯೊಬ್ಬರು ಶಾಲೆಯ ಇತರ ವಿದ್ಯಾರ್ಥಿಗಳಿಗೆ ಹೇಳುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ.

ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಎಲ್ಲ ಕಡೆ ಅಕ್ರೋಶ ವ್ಯಕ್ತವಾಗಿದ್ದು, ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಹುಡುಗ ಮುಸ್ಲಿಂ ಸಮುದಾಯದವನು. ಶಿಕ್ಷಕಿ ಕ್ರಮವು ಕೋಮುವಾದಿ ಸ್ವರೂಪದ್ದಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೋದಲ್ಲಿ ಶಿಕ್ಷಕಿ ಕೋಮುವಾದಿ ಪದಗಳನ್ನು ಬಳಸಿದ್ದು, ಪೊಲೀಸರೂ ಇದನ್ನು ಖಚಿತಪಡಿಸಿದ್ದಾರೆ.

ಗಣಿತ ಕೋಷ್ಟಕಗಳನ್ನು ಕಲಿಯದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಮಹಿಳಾ ಶಿಕ್ಷಕಿ ಹೊಡೆಸಿದ್ದಾರೆ ಎಂದು ಹೇಳಲಾಗಿದೆ. ವೀಡಿಯೋದಲ್ಲಿನ ಆಕ್ಷೇಪಾರ್ಹ ಕಾಮೆಂಟ್ ಬಗ್ಗೆ ನಾವು ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರೇ ತಮ್ಮ ಮಕ್ಕಳ ಶೈಕ್ಷಣಿಕ ಕುಸಿತಕ್ಕೆ ಕಾರಣ ಎಂದು ವೀಡಿಯೋದಲ್ಲಿ ಶಿಕ್ಷಕಿ ಹೇಳಿಕೆ ನೀಡಿದ್ದಾರೆ. ನಾವು ಮೂಲ ಶಿಕ್ಷಣ ಅಧಿಕಾರಿಗೆ ತಿಳಿಸಿದ್ದೇವೆ. ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿಯ ತಂದೆ, ಅಧಿಕಾರಿಗಳ ಜತೆಗೆ ಶಾಲಾ ಶಿಕ್ಷಕರು ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ನಮ್ಮ ಕಷ್ಟವನ್ನು ಕೇಳುವುದಿಲ್ಲ ಎಂದು ಆರೋಪಿಸಿದ್ದಾರೆ. ನನ್ನ ಮಗುವನ್ನು ಈ ಶಾಲೆಗೆ ಇನ್ನು ಮುಂದೆ ಕಳುಹಿಸುವುದಿಲ್ಲ, ನಾವು ನೀಡಿದ ಶಾಲಾ ಶುಲ್ಕವನ್ನು ಹಿಂದಿರುಗಿಸಿ, ಈ ವಿಚಾರವನ್ನು ಮುಂದುವರಿಸಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಮಕ್ಕಳ ಹಕ್ಕುಗಳ ಸಂಸ್ಥೆಯು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ.