ಲಕ್ನೋ : ತನ್ನ ಮೊದಲ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯವಿಲ್ಲದಿದ್ದರೆ ಮುಸ್ಲಿಂ ಸಮುದಾಯದ ಪುರುಷ ಕುರಾನ್ ಪ್ರಕಾರ 2ನೇ ಮದುವೆಯಾಗುವಂತಿಲ್ಲ ಹಾಗೇ, ಮೊದಲ ಪತ್ನಿಯ ಇಚ್ಛೆಗೆ ವಿರುದ್ಧವಾಗಿ 2ನೇ ಮದುವೆಯಾದ ವ್ಯಕ್ತಿ ಮೊದಲ ಪತ್ನಿಯೂ ತನ್ನೊಂದಿಗೆ ಇರಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರವಾಣಿ ಹಾಗೂ ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದೆ.
ಮುಸ್ಲಿಂ ಪುರುಷನು ತನ್ನ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದ, ಆತನಿಗೆ ಇತರ ಮಹಿಳೆಯರನ್ನು ಮದುವೆಯಾಗುವ ಅರ್ಹತೆ ಇಲ್ಲವೆಂದು ಕುರಾನ್ ಹೇಳುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯದ ನಿರ್ಣಯವೂ ಅದೇ ಆಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?
ಅಝೀಝುರ್ರಹ್ಮಾನ್ ಮತ್ತು ಹಮೀದುನ್ನಿಶಾ ಮೇ 1999ರಲ್ಲಿ ವಿವಾಹವಾಗಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದರು. ನಂತರ ಅಝೀಝುರ್ರಹ್ಮಾನ್ ಎರಡನೇ ಬಾರಿಗೆ ವಿವಾಹವಾದರು. ಎರಡನೇ ಹೆಂಡತಿಯಿಂದಲೂ ಅವರು ಮಕ್ಕಳನ್ನು ಹೊಂದಿದ್ದರು. ಈ ವಿಷಯವನ್ನು ತನ್ನ ಮೊದಲ ಹೆಂಡತಿಯಿಂದ ಮರೆ ಮಾಚಿದ್ದರು. ಹೇಗೋ ಹಮೀದುನ್ನಿಶಾಗೆ ವಿಷಯ ತಿಳಿದು ಆಕೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು.
ನಂತರ ಅಝೀಝುರ್ರಹ್ಮಾನ್ ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿ ತನ್ನ ಮೊದಲ ಹೆಂಡತಿಯನ್ನು ತನ್ನೊಂದಿಗೆ ವಾಸಿಸುವಂತೆ ನಿರ್ದೇಶಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ವರ್ಷದ ಆಗಸ್ಟ್ ನಲ್ಲಿ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಝೀಝುರ್ರಹ್ಮಾನ್ ಹೈಕೋರ್ಟ್ ಮೊರೆ ಹೋಗಿದ್ದರು.










