ಮೂಡಿಗೆರೆಯಲ್ಲಿ ಭಾರಿ ಮಳೆ! ಅಪಾಯದ ಮಟ್ಟ ಮೀರಿ ಹರಿಯತ್ತಿರುವ ನದಿಗಳು, ತಾಲ್ಲೂಕಿನಾದ್ಯಂತ ಹೈ ಅಲರ್ಟ್ ಘೋಷಣೆ!

794
firstsuddi

ಮೂಡಿಗೆರೆ: ತಾಲ್ಲೂಕಿನಾಧ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಇಲ್ಲಿನ ನದಿಕೊಳಗಳು ಬಹುತೇಕ ಭರ್ತಿಯಾಗಿದ್ದು, ಮಳೆಯು ಒಂದೇ ಸಮನೆ ಬಿಡುವಿಲ್ಲದಂತೆ ರಭಸವಾಗಿ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದ್ದು, ಕೆಲವು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಆತಂಕದಲ್ಲಿ ಮುಂದೇನಾಗಬಹುದು ಎಂದು ತಾಲ್ಲೂಕಿನ ಜನತೆ ಕಾದು ಕುಳಿತಿದ್ದಾರೆ.
ಮೂರು ದಿನಗಳಿಂದ ಎಡಬಿಡದೇ ರಭಸವಾಗಿ ಮಳೆ ಬರುತ್ತಿದ್ದು, ಹಾಗೇಯೇ ನಿನ್ನೆ ರಾತ್ರಿಯಿಂದ ನಿರಂತರವಾಗಿ ಗುಡುಗು ಸಹಿತ ತುಂಬಾ ರಭಸವಾಗಿ ಬೀಸುವ ಗಾಳಿಯ ಜೊತೆ ಅತಿವೇಗವಾಗಿ ನಿರಂತರ ಮಳೆ ಬರುತ್ತಿದ್ದು, ಜನಜೀವನ ಸದ್ಯ ಕಷ್ಟದ ಪರಿಸ್ಥಿತಿಯಲ್ಲಿ ಇದ್ದು, ರೈತರ ಭತ್ತದ ಗದ್ದೆಗಳು, ಹಾಗೂ ಕೆರೆಗಳು, ಸಂಪೂರ್ಣವಾಗಿ ಜಲಾವೃತವಾಗಿದ್ದು, ಕಿತ್ತಲೆಗಂಡಿ, ಮೆಣಸಮಕ್ಕಿ, ಹಂತೂರು, ಕೆಸವಳಲು ಕೂಡಿಗೆ ಹೇಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಇಲ್ಲಿನ ಸ್ಥಳೀಯ ಜನರು ಎಚ್ಚರಿಕೆಯಿಂದ ಇರಬೇಕಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ತಡ ರಾತ್ರಿಯಿಂದ ಬೆಳಗ್ಗಿನವರೆಗೆ ನಿರಂತರವಾಗಿ ಸುರಿದ ಮಳೆಯು ಸುಮಾರು 15 ಇಂಚುಗಳಿಗೂ ಮೀರಿದ್ದರಿಂದ ಇಲ್ಲಿನ ಹಂತೂರು ಹೇಮಾವತಿ ನದಿಯ ಸೇತುವೆ ಅಕ್ಕ ಪಕ್ಕದ ಪ್ರದೇಶ ಜಲಾವೃತವಾದ ಹಿನ್ನಲೆಯಲ್ಲಿ ಇಲ್ಲಿಗೆ ದೌಡಾಯಿಸಿದ ಅಧಿಕಾರಿಗಳು ಇಲ್ಲಿನ ಸುಮಾರು 5 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ತಿಳಿಸಿದ್ದು, ಅಲ್ಲದೇ ಇನ್ನು ಕೂಡ ಮಳೆಯ ಆರ್ಭಟ ಮುಂದುವರಿಯುವುದರಿಂದ ಇಲ್ಲಿನ ಸ್ಥಳೀಯ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆಯನ್ನು ನೀಡಿದ್ದು, ಹಗಲು ರಾತ್ರಿ ಎನ್ನದೆ ಇಲ್ಲಿನ ತಹಶೀಲ್ದಾರರು ಹಾಗೂ ಅಧಿಕಾರಿಗಳು ತಾಲ್ಲೂಕಿನ ವಿವಿದ ಕಡೆಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಿ ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಾಧ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.