ಮೂಡಿಗೆರೆ : ಅಂಬೇಡ್ಕರ್ ಭವನ ಸಮೀಪ ಕಸದ ರಾಶಿ – ಪಟ್ಟಣ ಪಂಚಾಯಿತಿ ವಿರುದ್ಧ ಸ್ಥಳೀಯರ ಆಕ್ರೋಶ…

210

ಮೂಡಿಗೆರೆ: ಸ್ವಚ್ಛ ಭಾರತ ಆಂದೊಲನದ ಕಾರ್ಯಕ್ರಮವು ನಗರ ಸ್ವಚ್ಛ ಸುಂದರವಾಗಿಡಬೇಕೆಂದು ಕೇಂದ್ರದ ಸ್ವಚ್ಛತಾ ಆಶಯ ಕಾರ್ಯಕ್ರಮದ ಯೋಜನೆಯಾಗಿದೆ. ಈ ಕಾರ್ಯಕ್ರಮದಿಂದ ಕೆಲ ಗ್ರಾಮೀಣ ಪ್ರದೇಶ, ನಗರ ಪ್ರದೇಶಗಳು ಅಲ್ಲಲ್ಲಿ ಪ್ರಗತಿಗಳು ಕಾಣುತ್ತಿವೆ. ಆದರೆ ಮೂಡಿಗೆರೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ಭವನ ಸಮೀಪ ಇರುವ ಕಸದ ರಾಶಿ ನೋಡಿದರೆ ಸಾರ್ವಜನಿಕರು ಅಡ್ಡಾಡುವ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ಬಿದ್ದು ಕೊಳೆತು ನಾರುತ್ತಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಬಿಳ್ಳೂರು ಮುರಳಿ ಅವರು, ಕಸದ ರಾಶಿ ಬಿದ್ದು ಹದಿನೈದು ದಿನಗಳು ಕಳೆದಿವೆ. ಅದನ್ನು ವಿಲೇವಾರಿ ಮಾಡದೆ ಮತ್ತು ಸ್ವಚ್ಛತಾ ಇಲ್ಲದೆ ಕಸದ ದುರ್ವಾಸನೆ ಬರುತ್ತಿದ್ದು, ಅಕ್ಕಪಕ್ಕದ ಮನೆಯವರು ಜೀವನ ನಡೆಸುವುದೇ ಕಷ್ಟವಾಗಿದ್ದು, ಇದೇ ರಸ್ತೆಯಲ್ಲಿ ಎಂಇಎಸ್ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಸಾಕಷ್ಟು ಬಾರಿ ಪಟ್ಟಣ ಪಂಚಾಯಿತಿಗೆ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ಪಟ್ಟಣ ಪಂಚಾಯಿತಿ ಇದಿಯೋ ಸತ್ತು ಹೋಗಿದಿಯೋ ತಿಳಿದಿಲ್ಲ ಎಂದರು.

ಕಸ ವಿಲೇವಾರಿ ಮಾಡುವುದರಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಇನ್ನು ಮುಂದೆಯಾದರೂ ಅಧಿಕಾರಿಗಳು ಕಸದ ಸಮಸ್ಯೆಯನ್ನು ನಿವಾರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.