ಮೂಡಿಗೆರೆ : ಅಡ್ಡಾದಿಡ್ಡಿ ಪಾರ್ಕಿಂಗ್‍ನಿಂದ ವಾಹನ ಸವಾರರಿಗೆ ಕಿರಿಕಿರಿ…

247
firstsuddi

ಕೊಟ್ಟಿಗೆಹಾರ: ಪ್ರವಾಸಿ ತಾಣಗಳ ಕೊಂಡಿಯಂತಿರುವ ಕೊಟ್ಟಿಗೆಹಾರವೂ ಸದಾ ಜನಸಂದಣಿಯಿಂದ ಕೂಡಿರುತ್ತದೆ. ವಾರಾಂತ್ಯ ದಿನಗಳಲ್ಲಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗಿರುತ್ತದೆ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ದಾಟಿದ ನಂತರ ಸಿಗುವುದೆ ಕೊಟ್ಟಿಗೆಹಾರ.
ಧರ್ಮಸ್ಥಳ, ಹೊರನಾಡು, ಬೇಲೂರು ಪ್ರವಾಸಿ ತಾಣಗಳು ಕೊಟ್ಟಿಗೆಹಾರದಿಂದ ಸಮಾನಾಂತರ ದೂರದಲ್ಲಿದೆ. ಈ ಎಲ್ಲಾ ಪ್ರವಾಸಿತಾಣಗಳಿಗೆ 48 ಕಿ.ಮಿ ದೂರವಿದೆ. ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರು ಪ್ರಯಾಣದ ಆಯಾಸವನ್ನು ಕಳೆಯಲು ಕೊಟ್ಟಿಗೆಹಾರದಲ್ಲಿ ಕೆಲಕಾಲ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆದು ಉಪಹಾರ ಸೇವಿಸಿ ಮುಂದೆ ಸಾಗುತ್ತಾರೆ. ಆದರೆ ಕೊಟ್ಟಿಗೆಹಾರದ ರಸ್ತೆ ಇಬ್ಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದು ಇತರ ಪ್ರವಾಸಿಗರಿಗೆ ಮತ್ತು ಇಲ್ಲಿನ ವರ್ತಕರಿಗೆ ತೊಂದರೆಯಾಗುತ್ತಿದೆ.
ವಾಹನವನ್ನು ನಿಲುಗಡೆ ಮಾಡುವಾಗ ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವ ಬದಲು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವುದು ಮತ್ತು ಗಂಟೆಗಟ್ಟಲೆ ರಸ್ತೆಯಲ್ಲೆ ವಾಹನ ಇರುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ವಿಶೇಷ ರಜೆದಿನಗಳಲ್ಲಿ, ವಾರಾಂತ್ಯ ದಿನಗಳಲ್ಲಿ ಸೇರಿದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕೊಟ್ಟಿಗೆಹಾರದಲ್ಲಿ ವಾಹನ ದಟ್ಟಣೆಯೂ ಕೂಡ ಹೆಚ್ಚಿದ್ದು ಇಲ್ಲಿ ದಟ್ಟಣೆ ನಿರ್ವಹಣೆ ಮತ್ತು ಸರಿಯಾದ ವಾಹನ ನಿಲುಗಡೆಗಾಗಿ ಹೋಂಗಾರ್ಡ್‍ಗಳನ್ನು ನೇಮಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.