ಮೂಡಿಗೆರೆ : ಈಜುಕೊಳವಾದ ಬಿ ಹೊಸಳ್ಳಿ ಭಾರತಿಬೈಲ್ ರಸ್ತೆ…

780
firstsuddi

ಬಣಕಲ್ : ಸಮೀಪದ ಬಿ. ಹೊಸಳ್ಳಿ ಭಾರತಿಬೈಲ್ ರಸ್ತೆಯೂ ಹೊಂಡಗುಂಡಿಗಳಿಂದ ತುಂಬಿದ್ದು ಗುಂಡಿಗಳಲ್ಲಿ ಮಳೆನೀರು ನಿಂತು ಈಜುಕೊಳದಂತಾಗಿದೆ. ಬಿ. ಹೊಸಳ್ಳಿಯಿಂದ ಭಾರತಿಬೈಲ್‍ವರೆಗೆ ಹಾಗೂ ಬಿ ಹೊಸಳ್ಳಿಯಿಂದ ಮತ್ತಿಕಟ್ಟೆವರೆಗೆ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿ ಮಾಡುವಂತೆ ಬಿ ಹೊಸಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರಾದ ಚಂದನ್ ಮಾತನಾಡಿ ಈ ರಸ್ತೆಯೂ ಹೊಸಳ್ಳಿ, ಮತ್ತಿಕಟ್ಟೆ, ಭಾರತಿಬೈಲ್, ಚಕ್ಕಮಕ್ಕಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಗ್ರಾಮದಿಂದ ಭಾರತಿಬೈಲ್‍ನಲ್ಲಿರುವ ಶಾಲೆಗೆ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ರಸ್ತೆಯೂ ಅಲ್ಲಲ್ಲಿ ಕೆಸರುಮಯವಾಗಿರುವುದರಿಂದ ವಿದ್ಯಾರ್ಥಿಗಳ ಸಮವಸ್ತ್ರ ಕೆಸರುಮಯವಾಗಿಸಿಕೊಂಡು ಶಾಲೆಗೆ ಹೋಗುವಂತಾಗಿದೆ. ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಪಟ್ಟಣಕ್ಕೆ ಇದೇ ರಸ್ತೆಯಲ್ಲಿ ಹೋಗಬೇಕಾಗಿದ್ದು ಹೊಂಡಗುಂಡಿಗಳಿಂದ ತುಂಬಿದ ರಸ್ತೆಗಳಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಕೂಡಲೇ ಜನಪ್ರತಿನಿಧಿಗಳು ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ 8 ನ ವರ್ಷದ ಹಿಂದೆ ಈ ರಸ್ತೆಗೆ ಡಾಂಬಾರಿಕರಣವಾಗಿದ್ದು ಅದರ ನಂತರ ಪ್ರತಿವರ್ಷವೂ ಗ್ರಾಮಸ್ಥರೇ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿಕೊಂಡು ಬರುತ್ತಿದ್ದಾರೆ. ಹಲವು ಬಾರಿ ರಸ್ತೆ ದುರಸ್ತಿಗೊಳಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಚರಿಸಲು ಅಸಾಧ್ಯವಾಗುವಷ್ಟು ರಸ್ತೆ ಹದಗೆಟ್ಟಿದ್ದು ರಸ್ತೆ ದುರಸ್ಥಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.