ಮೂಡಿಗೆರೆ : ಪಟ್ಟಣದ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಇರುವ ಜೆನೆರಿಕ್(ಜನೌಷಧಿ) ಔಷಧ ಮಳಿಗೆಯು ಹಲವು ದಿನಗಳಿಂದ ಬಾಗಿಲುಮುಚ್ಚಿದ್ದು, ಅಗತ್ಯವಿರುವ ಔಷಧಿಗಳು ಲಭ್ಯವಿಲ್ಲದೆ ರೋಗಿಗಳು ಹಾಗೂ ಅವರ ಸಂಬಂಧಿಕರು ಪರದಾಡುತ್ತಿದ್ದಾರೆ.
ಕೋರೋನಾ ಸೋಂಕಿನ ಮುಂಜಾಗೃತಾ ಕ್ರಮದಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು ಅಗತ್ಯ ವಸ್ತುಗಳ ಲಭ್ಯತೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ಸಹ ಜನೌಷಧಿ ಮಳಿಗೆ ಬಾಗಿಲು ಮುಚ್ಚಿರುವುದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. ಖಾಸಗಿ ಔಷಧ ಮಳಿಗೆಗಳಲ್ಲಿ ರೂ.60ಕ್ಕೆ ಸಿಗುವ ಔಷಧಿಗಳು ಜನೌಷಧಿ ಮಳಿಗೆಗಳಲ್ಲಿ ರೂ.15-20ಕ್ಕೆ ಸಿಗುತ್ತದೆ. ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಸರ್ಕಾರ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಜನರಿಕ್ ಔಷಧ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಕಾರಣವನ್ನೇ ಹೇಳದೆ ಏಕಾಏಕಿ ಬಾಗಿಲು ಮುಚ್ಚಿರುವುದರಿಂದ ಇದರ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ರವಿರಾಜ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಜನೌಷಧಿ ಮಳಿಗೆ ಮುಚ್ಚಿರುವುದರ ಬಗ್ಗೆ ಸಾರ್ವಜನಿಕರು ಬಂದು ಜಗಳವಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಖಾಸಗೀ ಬ್ರಾಂಡ್‍ಗಳಿಗಿಂತ ಶೇ-70-80ರಷ್ಟು ಕಡಿಮೆ ಬೆಲೆಗೆ ಸಿಗುವ ಔಷಧದ ಗುಣಮಟ್ಟ ಕೂಡ ಪ್ರಮಾಣೀಕರಣಗೊಂಡಿರುವುದರಿಂದ ಜನೌಷಧಿಗಳಿಗಾಗಿ ಸಾರ್ವಜನಿಕರು ಹೆಚ್ಚಿನ ಅವಲಂಬನೆಯಾಗಿದ್ದಾರೆ. ಲಾಕ್‍ಡೌನ್ ನಿಂದಾಗಿ ಕೆಲಸವಿಲ್ಲದೆ ಕೈ ಬರಿದುಮಾಡಿಕೊಂಡು ಕುಳಿತಿರುವ ಅನೇಕರಿಗೆ ಜನೌಷಧಿ ಅತ್ಯವಶ್ಯಕವಾಗಿದ್ದು, ಕೂಡಲೇ ಮಳಿಗೆಯನ್ನು ತೆರೆಸಿ ಅನುಕೂಲ ಮಾಡಿಕೊಡಬೇಕೆಂಬುದು ರೋಗಿಗಳ ಹಾಗೂ ಸ್ಥಳೀಯರ ಒತ್ತಾಯವಾಗಿದೆ.
- ಸುಧೀರ್ ಬಿ.ಟಿ










