ಮೂಡಿಗೆರೆ : ಎಲ್ಲಾ ಭಾಷೆಗಳು ಅಗತ್ಯವಾದರೂ ಕೂಡ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು- ಎ.ಬಿ ಕೃಷ್ಣೆಗೌಡ

334

ಮೂಡಿಗೆರೆ :ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಮತ್ತು ಭಾಷೆಯ ಏಳಿಗೆಗಾಗಿ ಶ್ರಮಿಸುತ್ತಿದ್ದು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ಸಾಹಿತಿ ಪೂರ್ಣೇಶ್ ಮತ್ತಾವರ ಹೇಳಿದರು. ತಾಲ್ಲೂಕು ಕಸಾಪ ಮತ್ತು ಬಣಕಲ್ ಹೋಬಳಿ ಕಸಾಪ ವತಿಯಿಂದ ಅತ್ತಿಗೆರೆಯ ಎ.ಬಿ ಕೃಷ್ಣೆಗೌಡ ಅವರ ಮನೆಯಂಗಳದಲ್ಲಿ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿದ ನಂತರವೂ ತನ್ನ ಅಸ್ತಿತ್ವವನ್ನೂ ಉಳಿಸಿಕೊಂಡಿರುವುದು ಸಂಸ್ಥೆಯ ಕಾರ್ಯಾಪರತೆಗೆ ಹಿಡಿದ ಕೈಗನ್ನಡಿಯಾಗಿದೆ. ಕನ್ನಡ ನಿಘಂಟುಗಳನ್ನು 12 ಸಂಪುಟಗಳಲ್ಲಿ ಬಿಡುಗಡೆಗೊಳಿಸಿ ಜನಸಾಮಾನ್ಯರಿಗೆ ನಿಘಂಟುಗಳು ದೊರೆಯುವಂತೆ ಮಾಡಿದೆ. ಕನ್ನಡದ ಪ್ರಸಿದ್ದ ಸಾಹಿತ್ಯ ಕೃತಿಗಳನ್ನು ಗುಣಮಟ್ಟದ ಮತ್ತು ರಿಯಾಯಿತಿ ದರದಲ್ಲಿ ಪ್ರಕಟಿಸಿ ಓದುಗರಿಗೆ ತಲುಪುವಂತೆ ಮಾಡಿರುವುದು ಕಸಾಪದ ಶ್ಲಾಘನೀಯ ಕಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅತ್ತಿಗೆರೆ ಗ್ರಾಮದ ಹಿರಿಯರಾದ ಎ.ಬಿ ಕೃಷ್ಣೆಗೌಡ ಮಾತನಾಡಿ ಎಲ್ಲಾ ಭಾಷೆಗಳು ಅಗತ್ಯವಾದರೂ ಕೂಡ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಪೋಷಕರು ಕನ್ನಡ ಭಾಷೆಯ ಬಗ್ಗೆ ಕೀಳಿರಿಮೆ ತೋರದೆ ಮಕ್ಕಳಿಗೆ ಕನ್ನಡ ಭಾಷಾಸೌಂದರ್ಯ ಮತ್ತು ಸಮೃದ್ದತೆಯ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಕನ್ನಡ ಈ ನೆಲದ ಭಾಷೆ. ಭಾಷೆ ಮರೆತರೆ ನಮ್ಮತನವನ್ನೆ ಕಳೆದುಕೊಂಡಂತೆ ಎಂದರು.
ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಎಸ್‍ಎಸïಎಲ್‍ಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯವನ್ನು ಆಯ್ದುಕೊಂಡು ಮುಂದಿನ ವಿದ್ಯಾಭ್ಯಾಸ ಮುಂದುವರಿಸಿ. ಪೋಷಕರು ಕೂಡ ನಿರ್ದಿಷ್ಟ ವಿಷಯವನ್ನೆ ಆಯ್ದುಕೊಳ್ಳಬೇಕು ಎಂಬ ಒತ್ತಡ ಹಾಕದೇ ಮಕ್ಕಳ ಆಸಕ್ತಿಯ ವಿಷಯವನ್ನು ತಿಳಿದುಕೊಂಡು ವಿದ್ಯಾಭ್ಯಾಸ ಕೊಡಸಲು ಮುಂದಾಗಿ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ಮೋಹನ್‍ಕುಮಾರ್ ಶೆಟ್ಟಿ ಮಾತನಾಡಿ ಬಣಕಲ್ ಮತ್ತು ಮೂಡಿಗೆರೆ ಕಸಾಪ, ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ, ಕಥಾ ಕಮ್ಮಟ, ಕವಿಗೋಷ್ಟಿ, ಸಮ್ಮೇಳನದಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಸದಾ ಸಕ್ರಿಯವಾಗಿದ್ದು ಗ್ರಾಮೀಣ ಭಾಗದ ಜಾನಪದ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸಿದೆ ಎಂದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸಾಧನಾ ಮತ್ತು ಮೂರನೇ ಸ್ಥಾನ ಪಡೆದ ಅನನ್ಯಾ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಕಾರ್ಯದರ್ಶಿಗಳಾದ ಲಕ್ಷ್ಮಣಗೌಡ, ಶಾಂತಕುಮಾರ್, ಕೋಶಾಧ್ಯಕ್ಷ ಹಳೆಕೆರೆ ರಘು, ಸದಸ್ಯರಾದ ಎಂ.ಎಸ್.ನಾಗರಾಜ್, ಬಣಕಲ್ ಕಸಾಪ ಕಾರ್ಯದರ್ಶಿ ವಸಂತ್ ಹಾರ್ಗೋಡು, ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು, ಪುಷ್ಪಗಿರಿ ಪ್ರತಿಷ್ಟಾನದ ಡಾ.ಮೋಹನ್‍ರಾಜಣ್ಣ, ಶಿಕ್ಷಕರಾದ ನಾಗರಾಜ್, ಭಕ್ತೇಶ್, ಲಿಂಗರಾಜ್, ಸಾಹಿತ್ಯಾಸಕ್ತರಾದ ಆಶಾ ಸಂತೋಷ್, ಸಂಜಯಗೌಡ, ಅಭಿಲಾಷ್, ಸಂತೋಷ್, ಅಶ್ವಥ್, ಆಂಜನೇಯ ಮುಂತಾದವರು ಇದ್ದರು.