ಮೂಡಿಗೆರೆ : ಏಸು ಕ್ರಿಸ್ತರು ಮಾನವರೂಪದಲ್ಲಿ ಜನಿಸಿ ಶಾಂತಿ, ಪ್ರೀತಿ, ಸೌಹಾರ್ದತೆಯ ಪ್ರತೀಕವಾಗಿದ್ದಾರೆ : ಫಾದರ್ ಆ್ಯಂಡ್ರು ಜಯರಾಜ್.

174
firstsuddi

ಕೊಟ್ಟಿಗೆಹಾರ : ಏಸು ಕ್ರಿಸ್ತರು ಮಾನವರೂಪದಲ್ಲಿ ಜನಿಸಿ ಶಾಂತಿ, ಪ್ರೀತಿ, ಸೌಹಾರ್ದತೆಯ ಪ್ರತೀಕವಾಗಿದ್ದಾರೆ ಎಂದು ಚಿಕ್ಕಮಗಳೂರು ಬಾಲ ಏಸು ಶಾಲೆಯ ಪ್ರಾಂಶುಪಾಲ ಫಾದರ್ ಆ್ಯಂಡ್ರು ಜಯರಾಜ್ ಹೇಳಿದರು.
ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ನಡೆದ ಕ್ರಿಸ್‍ಮಸ್ ಹಬ್ಬದ ಪೂಜೆ ಅರ್ಪಿಸಿ ಅವರು ಮಾತನಾಡಿದರು.
ಕೊರೊನಾ ಸಂಕಷ್ಟದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಗತ್ತಿಗಾಗಿ ನಮ್ಮ ಪ್ರಾರ್ಥನೆ ಅತ್ಯಮೂಲ್ಯವಾದುದು. ಪರಸ್ಪರ ಶಾಂತಿ, ಪ್ರೀತಿ, ದಯೆ, ದಾನವು ಧರ್ಮದ ಮೂಲವಾಗಬೇಕು. ಕ್ರಿಸ್ತರು ಜಗತ್ತಿಗೆ ಶಾಂತಿಯ ಮಂತ್ರ ಬಿತ್ತಿದರು. ಇದುವೇ ಏಸು ಮಾನವನಾಗಿ ಭುವಿಗೆ ಬಂದು ಕೊಟ್ಟ ಉತ್ತಮ ಸಂದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಆಲ್ಬರ್ಟ್ ಡಿಸಿಲ್ವ ಇದ್ದರು.

ವಿವಿದೆಡೆ ಕ್ರಿಸ್‍ಮಸ್ ಸಂಭ್ರಮ

ಕೊಟ್ಟಿಗೆಹಾರ, ಕೂವೆ, ಕೆಳಗೂರು ಸುತ್ತಮುತ್ತ ಕ್ರೈಸ್ತ ಭಾಂಧವರು ಕ್ರಿಸ್‍ವiಸ್ ಹಬ್ಬವನ್ನು ಸಂಭ್ಮ ಸಡಗರದಿಂದ ಆಚರಿಸಿದರು. ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚಿನಲ್ಲಿ ಧರ್ಮಗುರು ಲ್ಯಾನ್ಸಿ ಲೋಬೊ ಅವರು ಮಾತನಾಡಿ, ಕೊರೊನಾದಿಂದ ಜಗತ್ತಿನ ಜನರು ತತ್ತರಿಸಿ ಹೋಗಿದ್ದಾರೆ. ಸಂಭ್ರಮ ಪಡುವುದಕ್ಕಿಂತ ಸಂಕಷ್ಟದ ನೆರಳಿನಲ್ಲಿ ಬದುಕುತ್ತಿರುವ ನಮಗೆ ದೇವರ ಅನುಗೃಹ ಅಗತ್ಯವಿದೆ. ನಾವು ಜಗತ್ತಿಗಾಗಿಯೇ ಅಗತ್ಯವಾಗಿ ಪ್ರಾರ್ಥಿಸುವ ಅಮೂಲ್ಯ ಸಮಯ ಇದಾಗಿದೆ ಎಂದರು. ಕೊಟ್ಟಿಗೆಹಾರ ಚರ್ಚಿನ ನಿಕಟ ಪೂರ್ವ ಅಧ್ಯಕ್ಷ ಸಿಲ್ವೆಸ್ಟರ್ ಪಿರೇರಾ, ಉಪಾಧ್ಯಕ್ಷೆ ಜೆಸ್ಸಿಂತಾ ಡಿಸೋಜ ಅವರನ್ನು ಧರ್ಮಗುರು ಲ್ಯಾನ್ಸಿ ಲೋಬೊ ಕ್ರೈಸ್ತ ಭಕ್ತಾಧಿಗಳ ಪರವಾಗಿ ಸನ್ಮಾನಿಸಿದರು. ಬಾಳೂರು, ಜಾವಳಿ ಚರ್ಚಿನಲ್ಲಿ ಧರ್ಮಗುರು ಅಂತೋನಿ ಡಿಸೋಜ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿದರು.
ಕೂವೆಯ ಹೋಲಿ ಕ್ರಾಸ್ ಚರ್ಚಿನಲ್ಲಿ ಬಣಕಲ್ ಸಹಾಯಕ ಧರ್ಮಗುರು ಜಾರ್ಜ್ ಮೋನಿಸ್ ಪ್ರವಚನ ನೀಡಿ ಮಾತನಾಡಿ, ಜಗತ್ತಿನ ಒಳಿತಿಗಾಗಿ ತನ್ನ ಜೀವನವನ್ನೇ ಪಣವಾಗಿಟ್ಟು, ವೈರಿಯನ್ನೂ ಪ್ರೀತಿಸುವಂತೆ ಬೋಧಿಸಿದ ಏಸು ಕ್ರಿಸ್ತರ ಜೀವನವೇ ಒಂದು ಉತ್ತಮ ಸಂದೇಶವಾಗಿದೆ. ನಾವು ಕುಟುಂಬದಲ್ಲಿ ಪ್ರೀತಿಯಿಂದ ಬದುಕುವುದರ ಜೊತೆಗೆ ನೆರೆಹೊರೆಯವರೊಂದಿಗೂ ಆದರ್ಶ ಜೀವನ ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಸ್ಟ್ಯಾನಿ ಕಾರ್ಡೋಜಾ ಇದ್ದರು.
ಕೆಳಗೂರು ಚರ್ಚಿನಲ್ಲಿ ಹಿರೇಬೈಲ್ ಧರ್ಮಗುರು ಜಾರ್ಜ್ ಅಂದ್ರಾದೆ ಮಾತನಾಡಿ, ಏಸು ಕ್ರಿಸ್ತರು ಪ್ರೀತಿ, ಏಕತೆಯ ಸಂದೇಶವನ್ನು ಜಗತ್ತಿಗೆ ಸಾರಿ ಮಾನವ ಸ್ವರೂಪಿಯಾಗಿ ಮಾನವೀಯ ಮೌಲ್ಯಯುತ ಗುಣಗಳನ್ನು ಬೆಳೆಸಲು ಪ್ರೇರೇಪಿಸಿದರು. ಜಗತ್ತು ಪ್ರೀತಿ, ಕ್ಷಮೆ ಶಾಂತಿಯ ದ್ಯೋತಕವಾಗಬೇಕು ಎಂಬುದು ಯೇಸು ಕ್ರಿಸ್ತರ ಮೂಲ ಸಂದೇಶವಾಗಿತ್ತು. ಅಂತಹ ಸಂದೇಶವನ್ನು ನಾವು ಜೀವನದಲ್ಲಿ ಪಾಲಿಸಿ ನಡೆಯಬೇಕು ಎಂದರು.

ವಿವಿಧ ಚರ್ಚುಗಳಲ್ಲಿ ಆಕರ್ಷಕ ಗೋದಲಿಗಳು, ನಕ್ಷತ್ರಗಳ ದೃಶ್ಯ ಗಮನ ಸೆಳೆದವು. ಚರ್ಚುಗಳು ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸಿದವು. ಜನರ ಅಂತರ ಕಾಯ್ದುಕೊಂಡು ಹಬ್ಬದ ಪೂಜೆ ನಡೆಸಲಾಯಿತು. ಎಲ್ಲಾ ಚರ್ಚುಗಳಲ್ಲೂ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಪೂಜೆಯ ನಂತರ ಚರ್ಚುಗಳಲ್ಲಿ ಕೇಕ್, ಕಾಫಿ ನೀಡುವ ಮೂಲಕ ಸರಳ ಕ್ರಿಸ್‍ಮಸ್ ಆಚರಿಸಲಾಯಿತು.
ಕ್ರಿಸ್‍ಮಸ್ ಪ್ರಯುಕ್ತ ಬಣಕಲ್ ಕ್ರೈಸ್ತರ ಅಭಿವೃದ್ದಿ ಸಂಘದ ವತಿಯಿಂದ ಬಣಕಲ್ ಪೋಲಿಸ್ ಠಾಣೆಗೆ ಕ್ರಿಸ್‍ಮಸ್ ಕೇಕ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಮೆಲ್ವಿನ್ ಲಸ್ರಾದೊ, ಫ್ರಾನ್ಸಿಸ್ ಲೋಬೊ, ವಿನೋದ್ ಸಿಕ್ವೇರಾ, ಇಂತ್ರು ಕರ್ನೆಲಿಯೋ, ಪೋಲಿಸ್ ಸಿಬ್ಬಂದಿ ಮೆಹಬೂಬ್ ಇದ್ದರು.