ಕೊಟ್ಟಿಗೆಹಾರ : ಕಸ್ತೂರಿರಂಗನ್ ವರದಿ ಜಾರಿಯಾಗುವುದನ್ನು ವಿರೋಧಿಸಿ ಪಶ್ಚಿಮಘಟ್ಟ ಹಾದು ಹೋಗಿರುವ ಎಲ್ಲಾ ಜಿಲ್ಲೆಗಳ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಲಿ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್ ಬಾಲಕೃಷ್ಣ ಬಾಳೂರು ಅವರು ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕಸ್ತೂರಿರಂಗನ್ ಹೋರಾಟ ಸಮಿತಿಯ ವತಿಯಿಂದ ಸರ್ವಪಕ್ಷಗಳನ್ನು ಒಗ್ಗೂಡಿಸಿ ಚಿಕ್ಕಮಗಳೂರಿನಲ್ಲಿ ನಡೆದ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆದ ಹೋರಾಟ ಯಶಸ್ವಿಯಾಗಿದೆ. ಪ್ರತಿಭಟನೆಗೆ ಎಲ್ಲಾ ಪಕ್ಷದ ಮುಖಂಡರು, ರೈತರು, ಕೂಲಿ ಕಾರ್ಮಿಕರು, ಸಂಘಸಂಸ್ಥೆಗಳು ನಮ್ಮ ಹೋರಾಟವನ್ನು ಬೆಂಬಲಿಸಿವೆ. ಬೆಳೆಗಾರರ ಸಂಘದ ವತಿಯಿಂದ ಅವರಿಗೆ ಧನ್ಯವಾದ. ಕಸ್ತೂರಿ ರಂಗನ್ ಹೋರಾಟದಲ್ಲಿ ಎಲ್ಲರೂ ಒಮ್ಮತದಿಂದ ಮುಂದೆ ಸಾಗಬೇಕಿದೆ. ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗದೆ ಒಗ್ಗಟ್ಟಾಗಿ ಹೆಜ್ಜೆ ಇಡಬೇಕಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಕೇಂದ್ರ ಸರ್ಕಾರದ ಬಳಿ ಹೋಗಬೇಕಿದೆ ಎಂದರು.
ಕಸ್ತೂರಿರಂಗನ್ ವರದಿ ಯಾವ ಪಕ್ಷಗಳ ಕೂಸಲ್ಲ. ಇದು ಬಹುಸಂಖ್ಯಾತ ಎನ್‍ಜಿಓಗಳು ಮತ್ತು ಪರಿಸರವಾದಿಗಳ ಮುಖವಾಡ ತೊಟ್ಟವರ ಕೂಸು. ಹಿಂದೆ ಬ್ರಿಟಿಷರು ನಮ್ಮನ್ನು ಒಡೆದು ಆಳಿದ ರೀತಿಯಲ್ಲಿ ಎನ್‍ಜಿಓಗಳು ರಾಷ್ಟ್ರೀಯ ಪಕ್ಷಗಳನ್ನು ಒಡೆದು ಆಳುತ್ತಿದ್ದಾರೆ. ಅಧಿಕಾರಿಗಳನ್ನು ಕೈಮುಷ್ಠಿಯಲ್ಲಿ ಇಟ್ಟುಕೊಂಡು ಪಶ್ಚಿಮಘಟ್ಟವನ್ನು ತೋರಿಸಿ ಸಾವಿರಾರು ಕೋಟಿಗಳನ್ನು ಲೂಟಿ ಮಾಡುತ್ತಿದ್ದಾರೆ. ಉಪಗ್ರಹದ ಮೂಲಕ ಪಶ್ಚಿಮಘಟ್ಟಗಳನ್ನು ಚಿತ್ರ ತೋರಿಸಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದರು.
ಡಿಸೆಂಬರ್ 30ರೊಳಗೆ ಜನಪ್ರತಿನಿಧಿಗಳು ರಾಜಿನಾಮೆ ನೀಡಿ ಹಸಿರು ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು. ಭೌತಿಕ ಸರ್ವೆನಡೆಸಿ ಕಸ್ತೂರಿರಂಗನ್ ವರದಿಯಿಂದ ಮಲೆನಾಡನ್ನು ಕಾಪಾಡಬೇಕು ಎಂದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಎಲ್ಲಾ ಜಿಲ್ಲೆಗಳ ಜನಪ್ರತಿನಿಧಿಗಳು ರಾಜೀನಾಮೆ ನೀಡಲಿ-ಬಿ.ಆರ್...










