ಮೂಡಿಗೆರೆ : ಕಾಡುವ ಕಾಡಿನ ಜಗತ್ತು ತೇಜಸ್ವಿ ಸಾಹಿತ್ಯದ ಸ್ಥಾಯಿನೆಲೆಯಾಗಿದೆ : ಡಾ. ನರೇಂದ್ರ ರೈ ದೇರ್ಲ.

183
firstsuddi

ಕೊಟ್ಟಿಗೆಹಾರ : ಕಾಡುವ ಕಾಡಿನ ಜಗತ್ತು ತೇಜಸ್ವಿ ಸಾಹಿತ್ಯದ ಸ್ಥಾಯಿನೆಲೆಯಾಗಿದೆ ಎಂದು ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಕೋಶ ಓದು ದೇಶ ನೋಡು ಬಳಗ ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ನಡೆದ ತೇಜಸ್ವಿ ಜೊತೆ ಯುವಜನರ ಸಾಂಸ್ಕೃತಿಕ ಪಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳ ಮೂಲಕ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳು ಯುವ ಸಮುದಾಯವನ್ನು ತಲುಪುತ್ತವೆ. ತೇಜಸ್ವಿ ಅವರು ನೆಲದವರ ಒಡನಾಟದಿಂದ ನೆಲದವರ ಭಾಷೆಯನ್ನು ದಕ್ಕಿಸಿಕೊಂಡರು ಎಂದರು.
ಲೇಖಕಿ ರಾಜೇಶ್ವರಿ ತೇಜಸ್ವಿ ಅವರು ಮಾತನಾಡಿ ತೇಜಸ್ವಿ ಅವರು ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಪ್ರತಿಯೊಂದು ಸಮಸ್ಯೆಯನ್ನು ನೋಡುತ್ತಿದ್ದರು. ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದರ ಕಡೆಗೆ ತೇಜಸ್ವಿ ಅವರ ಚಿಂತನೆಗಳಿದ್ದವು. ಪರಿಸರ ಸಂರಕ್ಷಣೆಯೆ ಪ್ರಪಂಚದ ಮೊದಲ ಆಧ್ಯತೆಯಾಗಬೇಕು. ಪ್ರಕೃತಿ ಉಳಿಯದೇ ಮನುಷ್ಯನ ಉಳಿವು ಸಾಧ್ಯವಿಲ್ಲ ಎಂಬುವುದು ತೇಜಸ್ವಿ ಅವರ ನಿಲುವಾಗಿತ್ತು ಎಂದರು.
ಲೇಖಕ ಕೆ.ಪಿ ಸುರೇಶ್ ಅವರು ಮಾತನಾಡಿ ತೇಜಸ್ವಿ ಅವರ ಕರ್ವಾಲೊ ಕಾದಂಬರಿ ಬದುಕಿನ ನಿತ್ಯ ರಗಳೆಗಳನ್ನು ಬಿಟು ಮಹತ್ತಾದ ವಿಷಯವೊಂದನ್ನು ಅನ್ವೇಷಿಸುತ್ತಾ ಸಾಗುವ ಪಯಣದ ಕಥಾನಕ. ಆ ಕಾದಂಬರಿಯಲ್ಲಿ ನೋಡುವುದಕ್ಕಿಂತಲೂ ಕಾಣುವಿಕೆಯ ಮಹತ್ತನ್ನು ತೇಜಸ್ವಿ ಅವರು ಅದ್ಬುತವಾಗಿ ಚಿತ್ರಿಸಿದ್ದಾರೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಜನ ಮುಖಂಡರಾದ ಮುನೀರ್ ಕಾಟಿಪಳ್ಳ, ಸಾಮಾಜಿಕ ಜಾಲತಾಣಗಳನ್ನು ಯುವ ತಲೆಮಾರು ಗೀಳಾಗಿಸಿಕೊಂಡಿದ್ದು, ಅದೆ ಜಾಲತಾಣಗನ್ನು ಬಳಸಿಕೊಂಡು ಓದುವ ಹವ್ಯಾಸವನ್ನು ಯುವ ಓದುಗರಲ್ಲಿ ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತೇಜಸ್ವಿ ಒಡನಾಡಿಗಳಾದ ರಾಘವೇಂದ್ರ, ಬಾಪುದಿನೇಶ್, ಲೇಖಕರಾದ ಪೂರ್ಣೆಶ್ ಮತ್ತಾವರ, ಸತೀಶ್, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಸಿಬ್ಬಂದಿ ಸತೀಶ್ ಮುಂತಾದವರು ಇದ್ದರು.