ಮೂಡಿಗೆರೆ : ಕುಡುಕರ ಅಡ್ಡೆಗಳಾದ ಮಲೆನಾಡಿನ ನಿರ್ಜನ ಪ್ರದೇಶಗಳು…

364
firstsuddi

ಮೂಡಿಗೆರೆ : ಬಾರ್, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ಪಾರ್ಸಲ್‍ಗೆ ಮಾತ್ರ ಸೀಮಿತವಾಗಿರುವುದರ ಪರಿಣಾಮ ಮಲೆನಾಡಿನ ನಿರ್ಜನ ಪ್ರದೇಶಗಳು ಕುಡುಕರ ಅಡ್ಡೆಗಳಾಗುತ್ತಿವೆ.
ಪಟ್ಟಣದ ಮೂಡಿಗೆರೆ ಕ್ಲಬ್ ಹಿಂಭಾಗ, ಗಂಗನಮಕ್ಕಿ, ಬಿಳಗುಳದ ಅಂಬೇಡ್ಕರ್ ನಗರ ರಸ್ತೆ ಬದಿ, ಬೀಜುವಳ್ಳಿ ಹಾಗೂ ಬಣಕಲ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದಲ್ಲಿ ರಸ್ತೆ ಬದಿ, ತೋಟ, ಮನೆಯ ಸಮೀಪ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಂಡು ಬರುತ್ತಿದ್ದು ಸಂಜೆಯಾಗುತ್ತಿದ್ದಂತೆ ಪಾನಮತ್ತರಾಗಿ ಮೋಜುಮಸ್ತಿಯಲ್ಲಿ ತೊಡಗುವುದು ಕಂಡು ಬರುತ್ತಿದೆ.
ದೇವನಗೂಲ್ ಗ್ರಾಮಸ್ಥ ಶರತ್‍ಕುಮಾರ್ ಮಾತನಾಡಿ ಕೊಟ್ಟಿಗೆಹಾರ ಹೊರನಾಡು ರಸ್ತೆಯ ದೇವನಗೂಲ್ ಬಳಿ ರಸ್ತೆ ಬದಿಯಲ್ಲಿ ನನ್ನ ಮನೆ ಇದ್ದು ಸಂಜೆಯಾಗುತ್ತಿದ್ದಂತೆ ಮನೆಯ ಪರಿಸರದಲ್ಲಿ ಕೆಲ ಯುವಕರು ಮೋಜುಮಸ್ತಿಯಲ್ಲಿ ತೊಡಗಿ ಮದ್ಯ ಸೇವಿಸುತ್ತಿದ್ದು ಮನೆಗಳ ಮೇಲೆ ಮದ್ಯದ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಉಡಾಪೆ ಉತ್ತರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಫಿ ಬೆಳೆಗಾರ ಅಸ್ಗರ್ ಅಹಮ್ಮದ್ ಮಾತನಾಡಿ ನನ್ನ ತೋಟವೂ ಹೆದ್ದಾರಿ ಸಮೀಪ ಇದ್ದು ಕಾಫಿ ತೋಟದ ಗಿಡಗಳ ಬಳಿ ಕಿಡಿಗೇಡಿಗಳು ರಾಶಿ ಗಟ್ಟಲೇ ಮದ್ಯದ ಬಾಟಲಿ ಬಿಸಾಕಿ ಹೋಗಿದ್ದಾರೆ. ತೋಟಕ್ಕೆ ಸಾಗುವ ರಸ್ತೆಗೆ ಬಾಟಲಿಗಳನ್ನ ಒಡೆದು ಹಾಕುತ್ತಿದ್ದು ಪ್ರತಿದಿನ ಇದು ಮುಂದುವರಿಯುತ್ತಿದೆ. ಮೋಜು ಮಾಡಿ ಬಾಟಲಿ ಒಡೆದು ಹಾಕಿ ತೊಂದರೆ ನೀಡುತ್ತಿರುವ ಕಿಡಿಗೇಡಿಗಳ ವಿರುದ್ದ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.