ಮೂಡಿಗೆರೆ : ಕೊರೋನಾ ಪಾಸಿಟಿವ್ ಹಿನ್ನೆಲೆ, ಸಾರ್ವಜನಿಕರು ಮೊದಲಿಗಿಂತ ಇನ್ನೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು : ಜಿಲ್ಲಾಧಿಕಾರಿ ಮನವಿ.

374
firstsuddi

ಮೂಡಿಗೆರೆ : ಸರ್ಕಾರಿ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರು ಸಾರ್ವಜನಿಕರು ಈ ವಿಚಾರದಲ್ಲಿ ವಿನಾಕಾರಣ ಆತಂಕಕ್ಕೆ ಒಳಗಾಗಬಾರದು ಹಾಗೂ ಮೊದಲಿಗಿಂತ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕು ಎಂದು ಮನವಿ ಮಾಡಿದರು.
ಮೂಡಿಗೆರೆಯ ನಂದೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿಗಳು ಮಾದ್ಯಮದವರೊಂದಿಗೆ ಮಾತನಾಡುತ್ತಾ, 2 ತಿಂಗಳಿನಿಂದ ಎಲ್ಲರೂ ಒಗ್ಗಟ್ಟಾಗಿ ಕೊರೋನಾ ವಿರುದ್ದ ಹೋರಾಟ ನಡೆಸಿ ಗ್ರೀನ್ ಜೋನ್ ನಲ್ಲಿ ಇರುವಂತೆ ನೋಡಿಕೊಂಡಿದ್ದೆವು. ದುರದೃಷ್ಟವಶಾತ್ ಕೊರೋನಾ ಸೋಕು ದೃಢಪಟ್ಟಿದೆ. ಅದರಲ್ಲಿಯೂ ವೈದ್ಯರೊಬ್ಬರಿಗೆ ಸೋಂಕು ತಗುಲಿರುವುದು ಹೆಚ್ಚಿನ ಆತಂಕ ಉಂಟು ಮಾಡುತ್ತದೆ. ಆದರೆ ಸಾರ್ವಜನಿಕರು ಹೆದರಬೇಕಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಮೊದಲಿಗಿಂತಲೂ ಈಗ ನಾವೆಲ್ಲರೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಅಗತ್ಯ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಲ್ಲಿ ಕೊರೋನಾ ಸೋಂಕಿನ ವಿರುದ್ಧದ ಹೋರಾಟವನ್ನು ಯಶಸ್ವಿಗೊಳಿಸಬಹುದು ಎಂದರು.

ನಂತರ ಮಾತನಾಡಿದ ಅವರು ಸೊಂಕಿತರ ಟ್ರಾವೆಲ್ ಹಿಸ್ಟರಿಯನ್ನು ಪಡೆದುಕೊಳ್ಳಲಾಗಿದೆ. ಅವರ ಜೊತೆ ಸಂಪರ್ಕದಲ್ಲಿ ಇರುವ ಎಲ್ಲಾ ವ್ಯಕ್ತಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಸದ್ಯ ಈಗ ನಂದೀಪುರ ಗ್ರಾಮ ಹಾಗು ವೈದ್ಯರು ವಾಸವಾಗಿರುವ ಬಿಳಗುಳದ ಸುಶಾಂತ್ ನಗರವನ್ನು ಸೀಲ್ ಡೌನ್ ಮಾಡಲಾಗಿದ್ದು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಮಾಹಿತಿ ನೀಡಿದರು.

ಕೊರೋನಾ ಸೋಂಕು ಇದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಪೋಲಿಸ್ ಇಲಾಖೆ ಪಟ್ಟಣದಾದ್ಯಂತ ಭಿಗಿ ಬಂದೋಬಸ್ತ್ ಮಾಡಿದ್ದು ಬ್ಯಾರಿಕೇಡ್‍ಗಳನ್ನು ಹಾಕಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇತ್ತ ಸಾರ್ವಜನಿಕ ವಲಯದಲ್ಲಿ ಈ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದ್ದು ಮೂಡಿಗೆರೆಯಲ್ಲಿ ವಾಸವಾಗಿರುವ ತಮ್ಮ ಕಡೆಯವರಿಗೆ ಫೋನ್ ಮಾಡಿ ಆತಂಕ ವ್ಯಕ್ತಪಡಿಸುತ್ತಿದ್ದ ಬಂಧುಗಳ ಮನಸ್ಥಿತಿ ಮೂಡಿಗೆರೆಯಾದ್ಯಂತ ಸೂತಕದ ಛಾಯೆ ಮೂಡಿಸಿರುವುದಂತೂ ಸತ್ಯ.