ಮೂಡಿಗೆರೆ : ಚಾರ್ಮಡಿ ಘಾಟ್‍ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಗಾಯಗೊಂಡ ಯುವಕ ಸತೀಶ್ ಪ್ರಾಣಾಪಾಯದಿಂದ ಪಾರು…

1220
firstsuddi

ಮೂಡಿಗೆರೆ : ಸೆಲ್ಫಿ ತೆಗೆಯಲು ಹೋಗಿ 100 ಅಡಿ ಎತ್ತರದಿಂದ ಬಿದ್ದ ಯುವಕ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆರೋಗ್ಯವಾಗಿದ್ದಾನೆ ಎಂದು ಸತೀಶ್ ಸಂಬಂಧಿಕ ರಾಜೇಶ್ ತಿಳಿಸಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ನಿವಾಸಿ ಸತೀಶ್(21) ಅವರು ಚಾರ್ಮಡಿ ಘಾಟ್‍ಗೆ ಸ್ನೇಹಿತರೊಡನೆ ಬಂದಿದ್ದು, ಫೋಟೋ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ತಲೆ, ಕೈಕಾಲು ಹಾಗೂ ಸೊಂಟಕ್ಕೆ ಗಂಭೀರ ಪೆಟ್ಟು ಬಿದ್ದಿದ್ದು, ಪ್ರಥಮ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸ್ಥಳೀಯರಾದ ಸಂಜಯ್ ಕೊಟ್ಟಿಗೆಹಾರ ಚಾರ್ಮಡಿ ಘಾಟ್‍ನಲ್ಲಿ ಕಳೆದ ವರ್ಷವೂ ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ಸಾವನ್ನಪ್ಪಿದ್ದ. ರಜೆ ದಿನಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಈ ರಸ್ತೆಯಲ್ಲಿ ಬರುವುದರಿಂದ ಪೊಲೀಸರ ಗಸ್ತು ವಾಹನ ಇದ್ದರೆ ಇಂತಹ ಅಪಘಾತವನ್ನು ತಪ್ಪಿಸಬಹುದು ಹಾಗೂ ಪೊಲೀಸರು ತಿರುಗಾಡುತ್ತಿದ್ದರೆ ಪ್ರವಾಸಿಗರಿಗೂ ಭಯ ಇರುತ್ತದೆ. ಪೊಲೀಸ್ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.