ಮೂಡಿಗೆರೆ : ಜನನಿಬಿಡ ರಸ್ತೆಯಲ್ಲಿ ಗುಜರಿ ಅಂಗಡಿ-ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಪಟ್ಟಣ ಪಂಚಾಯತಿ…

1454
firstsuddi

ಮೂಡಿಗೆರೆ : ಜನನಿಬಿಡ ಪ್ರದೇಶದಲ್ಲಿರುವ ಗುಜರಿ ಅಂಗಡಿಯನ್ನು ತೆರವುಗೊಳಿಸುವಂತೆ ಮೂಡಿಗೆರೆಯ ದೊಡ್ಡಿಬೀದಿ ರಸ್ತೆಯ ಸಾರ್ವಜನಿಕರು ಮೂಡಿಗೆರೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಡಿಗೆರೆಯ ದೊಡ್ಡಿ ಬೀದಿ ರಸ್ತೆಯು ತುಂಬಾ ಕಿರದಾದ ರಸ್ತೆಯಾಗಿದ್ದು, ಜನನಿಬಿಡ ರಸ್ತೆಯಾಗಿದೆ. ಅಲ್ಲದೆ ಈ ಬಡಾವಣೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ವಾಸವಾಗಿದ್ದು, ಇದೇ ರಸ್ತೆಯಲ್ಲಿರುವ ಅನಾಮಧೇಯ ಗುಜರಿ ಅಂಗಡಿಯಿಂದಾಗಿ ಸ್ಥಳೀಯರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸ್ಥಳೀಯ ಮಹಿಳೆ ಯಾಸ್ಮಿನ್ ಸುಲ್ತಾನ ಅವರು, ಗುಜರಿ ಅಂಗಡಿ ಇರುವ ಜಾಗದ ಅಕ್ಕಪಕ್ಕದಲ್ಲಿ ವಯಸ್ಸಾದ ಹಲವು ನಾಗರೀಕರು ಇದ್ದು, ಗುಜರಿ ಅಂಗಡಿಯ ಕೊಳಕಿನಿಂದಾಗ ಹಲವರು ಹೃದಯ ಹಾಗೂ ಶ್ವಾಸ ಸಂಬಂಧಿ ಖಾಯಿಲೆಗಳಿಗೆ ಒಳಗಾಗಿದ್ದಾರೆ. ಅಲ್ಲದೆ ಈ ಭಾಗದಲ್ಲಿನ ಮಕ್ಕಳು ಇಲ್ಲಿರುವ ರಸ್ತೆಯಲ್ಲಿ ಆಟವಾಡುವಾಗ ಗುಜರಿ ಅಂಗಡಿ ಬಳಿ ಇರುವ ಗಾಜಿನ ಚೂರು, ಕಬ್ಬಿಣದ ಚೂರುಗಳಿಂದಾಗಿ ಗಾಯಗಳನ್ನು ಮಾಡಿಕೊಂಡು ಬಳಲುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶಾಲಾ ಬಾಲಕನೊಬ್ಬ ಶಾಲೆಗೆ ತೆರಳುವಾಗ ಗುಜರಿ ಅಂಗಡಿ ಬಳಿ ಬಿದ್ದಿದ್ದ ಗಾಜಿನ ಚೂರು ತುಣಿದು ದೊಡ್ಡ ಮಟ್ಟದ ಚಿಕಿತ್ಸೆಗೆ ಒಳಗಾಗಿದ್ದು ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ವಿಷಯದ ಗಂಭೀರತೆ ಅರ್ಥ ಮಾಡಿಕೊಂಡು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ವಾಹನ ಚಾಲಕ ಮೊಹಮದ್ ಆಲಿ ಅವರು ಮಾತನಾಡುತ್ತ, ನನ್ನದು ವಾಹನ ಚಲಾಯಿಸಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಆದರೆ ಗುಜರಿ ಅಂಗಡಿ ಬಳಿ ಬಿದ್ದಿರುವ ಗಾಜಿನ ಚೂರು ಮತ್ತು ಮೊಳೆಗಳಿಂದಾಗಿ ವಾರಕ್ಕೆರಡು ಬಾರಿ ವಾಹನದ ಟೈರ್ಗಳು ಪಂಕ್ಚರ್ ಆಗುತ್ತಿದ್ದು ಬರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ಟೈರ್ ಸರಿ ಮಾಡುವುದಕ್ಕಾಗಿ ಮೀಸಲಿಡುವ ಅನಿವಾರ್ಯತೆ ಎದುರಾಗಿದೆ. ಬೇರೆ ದಾರಿಯಲ್ಲಿ ವಾಹನ ಚಲಾಯಿಸೋಣವೆಂದರೆ ಈ ರಸ್ತೆಯಲ್ಲಿರುವ ಶಾಲಾ ಮಕ್ಕಳನ್ನು ಮನೆಯ ಬಳಿಗೆ ಬಂದು ಕರೆದೊಯ್ಯಬೇಕು, ಇಲ್ಲವಾದಲ್ಲಿ ಮಕ್ಕಳ ಪೋಷಕರು ಬೇರೆ ವಾಹನಕ್ಕೆ ವಂತಿಗೆ ಗೊತ್ತುಪಡಿಸಿಕೊಳ್ಳುತ್ತಾರೆ. ಈ ವಿಚಾರವಾಗಿ ಸ್ಥಳೀಯರ ಜೊತೆಗೂಡಿ ಪಟ್ಟಣ ಪಂಚಾಯತಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಪ್ರಸ್ತುತ ಈಗಿರುವ ಗುಜರಿ ಅಂಗಡಿಗೆ ಪಟ್ಟಣ ಪಂಚಾಯತಿಯಿಂದ ಯಾವುದೇ ಪರವಾನಗಿ ನೀಡಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಸ್ಥಳೀಯ ಸಂಸ್ಥೆಗಳು ಕೂಡ ಇಂತಹ ಗುಜರಿ ಅಂಗಡಿಗಳಿಗೆ ಜನನಿಬಿಡ ಪ್ರದೇಶಗಳಲ್ಲಿ ವ್ಯವಹಾರ ನಡೆಸಲು ಅನುಮತಿ ನೀಡುವಂತೆ ಇಲ್ಲ. ಅದರೆ ಇದರ ಮಾಲೀಕ ರೀತಿ ನೀತಿಗಳನ್ನು ಗಾಳಿಗೆ ತೂರಿ ವ್ಯವಹಾರವನ್ನು ನಡೆಸುತ್ತಿದ್ದಾನೆ. ಅಲ್ಲದೆ ಪಟ್ಟಣ ಪಂಚಾಯತಿಯ ಕೆಲ ಅಧಿಕಾರಿಗಳು ಈತನಿಂದ ಹಣ ಪಡೆದುಕೊಂಡು ವ್ಯವಹಾರ ನಡೆಸಲು ಅನುಮತಿ ನೀಡಿದ್ದಾರೆ ಎನ್ನುವುದು ಹಲವರ ವಾದವಾಗಿದೆ. ಅಲ್ಲದೆ ಗುಜರಿ ಪದಾರ್ಥಗಳನ್ನು ತುಂಬಿಸಿಕೊಳ್ಳಲು 8 ಚಕ್ರದ ಲಾರಿಗಳು ಆಗಾಗ್ಗೆ ಈ ರಸ್ತೆಯಲ್ಲಿ ನಿಲ್ಲುವುದರಿಂದ ರಸ್ತೆ ಸಂಪೂರ್ಣವಾಗಿ ಸ್ಥಗಿತವಾಗುತ್ತದೆ. ಹಳೇ ವಯರ್, ಬೇಡದ ಪ್ಲಾಸ್ಟಿಕ್, ರಬ್ಬರ್ ವಸ್ತಗಳನ್ನು ಸುಡುವುದರಿಂದ ಕಪ್ಪು ಹೊಗೆಯ ಜೊತೆಗೆ ಕೆಟ್ಟ ವಾಸನೆಯಿಂದಾಗಿ ಸ್ಥಳೀಯರು ಕಣ್ಣು-ಮೂಗು ಮುಚ್ಚಿಕೊಂಡು ಜೀವನ ಸಾಗಿಸಬೇಕಾಗಿದೆ. ಗುಜರಿ ಅಂಗಡಿ ಸುತ್ತಮುತ್ತ ಅನೈರ್ಮಲ್ಯ ತಾಂಡವವಾಡುತ್ತಿದ್ದು ಸೊಳ್ಳೆಗಳು ಹೆಚ್ಚಳಗೊಂಡು ಮಲೇರಿಯಾ, ಡೆಂಗ್ಯೂನಂಥಹ ಮಾರಕ ಖಾಯಿಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಸ್ವಚ್ಚ ಭಾರತ್ ಅಭಿಯಾನದ ಅಡಿಯಲ್ಲಿ ಪಟ್ಟಣ ಪಂಚಾಯತಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದು, ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಘನಘೋರ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.