ಮೂಡಿಗೆರೆ : ಚಿಕ್ಕಬಳ್ಳಾಪುರ ಜಿಲ್ಲೆಯ ಕುಂದಾಣದಲ್ಲಿ ನಡೆದ ರಾಜ್ಯಮಟ್ಟದ ಅತ್ಲೆಟಿಕ್, ರಿಲೇ, ನಡಿಗೆ, ಕಬಡ್ಡಿ, ಖೋಖೊ, ಷಟಲ್ ಬ್ಯಾಡ್ಮಿಂಟನ್ ಮತ್ತಿತರ ಕ್ರೀಡೆಗಳಲ್ಲಿ ಕೊಟ್ಟಿಗೆಹಾರದ ತರುವೆ ಏಕಲವ್ಯ ವಸತಿ ಶಾಲೆಯ ಮಕ್ಕಳು ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕರಾದ ಬಸವರಾಜ್ ತಿಳಿಸಿದ್ದಾರೆ.
ಅವರು ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿ, ಹದಿನಾಲ್ಕು ವಯೋಮಾನದ ಬಾಲಕರ ಕಬಡ್ಡಿಯಲ್ಲಿ ಏಕಲವ್ಯ ಶಾಲೆಯ ತಂಡ ಪ್ರಥಮ ಸ್ಥಾನ ಪಡೆಯಿತು. ರಿಲೇ ವಿಭಾಗದಲ್ಲೂ ಬಾಲಕರು ಪ್ರಥಮ ಸ್ಥಾನ ಪಡೆದರು. 3000ಮೀ ನಡಿಗೆಯಲ್ಲಿ ಹಾಗೂ 1500ಮೀ ಓಟದಲ್ಲೂ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದರು. ಅದೇ ವಯೋಮಾನದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯ, ಖೋಖೋ ಪಂದ್ಯ, ರಿಲೇ, ಚಕ್ರ ಎಸೆತ, ಉದ್ದ ಜಿಗಿತದಲ್ಲೂ ಏಕಲವ್ಯ ಶಾಲೆಯ ಬಾಲಕೀಯರು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಬಾಚಿಕೊಂಡರು.
ಹತ್ತೊಂಬತ್ತರ ವಯೋಮಾನದ ಬಾಲಕರ ವಿಭಾಗದ ಕಬಡ್ಡಿ, ರಿಲೇ, ಉದ್ದ ಜಿಗಿತ, 100ಮೀ, 200ಮೀ ಓಟದಲ್ಲೂ ಏಕಲವ್ಯ ವಸತಿ ಶಾಲೆಯ ಬಾಲಕರು ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದರು. ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಇದೇ ವಯೋಮಾನದ ಬಾಲಕೀಯರ ವಿಭಾಗದಲ್ಲಿ ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಚಿನ್ನ ಗೆದ್ದರೆ, ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದರು.
ತರುವೆ ಏಕಲವ್ಯ ವಸತಿ ಶಾಲೆಯ 72 ಮಕ್ಕಳು ಡಿಸೆಂಬರ್ 8 ರಿಂದ 14 ರವರೆಗೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲೆಯ ಪ್ರಮುಖ ತರಬೇತುದಾರ ನಾಗಪ್ಪ ಬಿಸನಾಳ ತಿಳಿಸಿದ್ದಾರೆ.










