ಮೂಡಿಗೆರೆ ತಾಲೂಕಿನಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳ ಕೊರತೆ – ಜನರಿಗೆ ಸೌಕರ್ಯವಿಲ್ಲ.

50

ಕೊಟ್ಟಿಗೆಹಾರ: ಆಧಾರ್ ಕಾರ್ಡ್ ತಿದ್ದುಪಡಿ ಸೇವೆಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಿರುವುದು ಆನಂದದ ಸಂಗತಿಯಾದರೂ, ಈ ಸೇವೆ ಗ್ರಾಮೀಣ ಪ್ರದೇಶದ ಜನತೆಗೆ ತಲುಪುವಲ್ಲಿ ಹಲವಾರು ಅಡಚಣೆಗಳಿವೆ. ಮೂಡಿಗೆರೆ ತಾಲೂಕಿನಾದ್ಯಂತ ಕೇವಲ ಎರಡು ಅಥವಾ ಮೂರಷ್ಟೇ ಕೇಂದ್ರಗಳಲ್ಲಿ ಈ ಸೇವೆ ಲಭ್ಯವಿರುವುದರಿಂದ ನೂರಾರು ಜನರು ಪ್ರತಿದಿನ ಸೇವೆಗಾಗಿ ಬಂದು, ಟೋಕನ್ ಸಿಗದೆ ನಿರಾಸೆಯೊಂದಿಗೆ ಹಿಂದಿರುಗುವ ಸ್ಥಿತಿಯಿದೆ.

ಪ್ರಸ್ತುತ ಬಿಎಸ್‌ಎನ್‌ಎಲ್ ಕಚೇರಿ ಹಾಗೂ ಕೆಲ ಬ್ಯಾಂಕುಗಳಲ್ಲಿ ಮಾತ್ರ ಆಧಾರ್ ತಿದ್ದುಪಡಿ ಸೇವೆ ಲಭ್ಯವಿದ್ದು, ಇವು ಜನಸಂದಣಿಯ ತೂಕವನ್ನು ಭರಿಸಲು ಸಾಕಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಜನರು ದೂರದೂರಿಂದ ಬಂದು, ಬೇಸತ್ತು ಹಿಂತಿರುಗುವಂತಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬಣಕಲ್ ಹೋಬಳಿ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ ಅವರು ಮಾತನಾಡುತ್ತಾ, “ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆಧಾರ್ ತಿದ್ದುಪಡಿ ಸೇವೆ ಲಭ್ಯವಾಗಬೇಕು. ತಾಲೂಕು ಮಟ್ಟದಲ್ಲಿ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಬೇಕು.” ಎಂಬ ಆಗ್ರಹ ವ್ಯಕ್ತಪಡಿಸಿದರು.

“ಡಿಜಿಟಲ್ ಸೇವೆಗಳ ಲಾಭ ಎಲ್ಲರಿಗೂ ಸಮಾನವಾಗಿ ತಲುಪಬೇಕಾದರೆ, ಈ ಮೂಲಭೂತ ಸೇವೆಗಳ ವಿಸ್ತರಣೆ ಅವಶ್ಯಕವಾಗಿದೆ. ಸರ್ಕಾರ ಹಾಗೂ ಸ್ಥಳೀಯ ಶಾಸಕರು ಈ ಕುರಿತು ತ್ವರಿತ ಕ್ರಮ ಕೈಗೊಳ್ಳಬೇಕು,” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.