ಮೂಡಿಗೆರೆ : ಇಂದು ಪಟ್ಟಣದ ತಾಲ್ಲೂಕು ಪಂಚಾಯತಿಯ ಆವರಣದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಮಾಸಿಕ ಕೆ.ಡಿ.ಪಿ ಸಭೆ ನಡೆಸಲಾಯಿತು.
ಈ ಬಾರಿಯ ಅತೀವೃಷ್ಟಿಯಲ್ಲಿ ಭೂಮಿ ಕಳೆದುಕೊಂಡವರ ಹಾಗೂ ಸಂತ್ರಸ್ತರ ವಿಚಾರವಾಗಿ ಪ್ರಾರಂಭವಾದ ಸಭೆಯಲ್ಲಿ ಮೂಡಿಗೆರೆ ತಹಶೀಲ್ದಾರ್ ಅವರು ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ಕಾಮಗಾರಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ನಂತರ ಮಾತನಾಡಿದ ಅವರು ಭಾರೀ ಹಾನಿಗೆ ಒಳಗಾಗಿರುವ ಮಲೆಮನೆ, ಕಳಸ, ಹಿರೇಬೈಲು, ಬಾಳೂರು ಸೇರಿದಂತೆ ಹಾನಿಗೆ ಒಳಗಾಗಿರುವ ಸಂತ್ರಸ್ತರಿಗೆ ನಲೆ ಕಲ್ಪಿಸಿಕೊಡುವ ಸಲುವಾಗಿ ಕಾರ್ಯ ಪ್ರಗತಿಯಲ್ಲಿದೆ. ರೆವಿನ್ಯೂ ಜಾಗ ಲಭ್ಯತೆ ಇಲ್ಲದಿರುವುದು ಹೊಸ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಹಿನ್ನಡೆ ಉಂಟುಮಾಡುತ್ತಿದೆ. ಆದುದರಿಂದ ಕಳಸದಿಂದ 22 ಕಿಮೀ ದೂರದಲ್ಲಿ ಜಾಗ ಗುರುತಿಸಿದ್ದು ಕೆಲಸ ಪ್ರಗತಿಯಲ್ಲಿದೆ. ಆದರೆ ಇನ್ನು ಹೆಚ್ಚಿನ ಜಾಗಗಳ ಅವಶ್ಯಕತೆ ಇದ್ದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಕೆಲವು ಕಾನೂನು ಬದ್ಧ ತೊಡಕುಗಳಿಂದಾಗಿ ಅಧಿಕಾರಿಗಳು ಅಸಹಾಯಕರಾಗಿದ್ದೇವೆ. ಜಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಅನುಕೂಲತೆ ಕಲ್ಪಿಸಿದಲ್ಲಿ ಆದಷ್ಟು ಬೇಗನೆ ಕೆಲಸ ಮುಗಿಸಬಹುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು, ಅಧಿಕಾರಿಗಳಾದ ನೀವು ಸರಕಾರ ಪರಿಹಾರ ಕಾರ್ಯ ಮಾಡಬೇಕು ಎನ್ನುವ ಸೂಚನೆ ಮೇರೆಗೆ ಮಾತ್ರ ಕೆಲಸ ಮಾಡುತ್ತಿದ್ದೀರೋ ಅಥವಾ ಸಾರ್ವಜನಿಕರ ಮೇಲಿನ ಅನುಕಂಪದ ಮೇಲೆ ಕೆಲಸ ನಿರ್ವಹಿಸುತ್ತಿದ್ದೀರೋ ಎಂದು ತಿಳಿಯುವುದು ಕಷ್ಟವಾಗಿದೆ. ಹಿಂದಿನ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಅತಿವೃಷ್ಟಿಯಿಂದ ಕಾಫಿ ತೋಟ ಕಳೆದುಕೊಂಡಿರುವವರಿಗೆ ಪ್ರತಿಯಾಗಿ ಕಾಫಿ ತೋಟಗಳನ್ನೇ ನೀಡಬೇಕು ಎಂದು ನಿರ್ಧಾರವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳೀಯವಾಗಿ ಯಾರಾದರೂ ಕಾಫಿ ತೋಟಗಳನ್ನು ಮಾರುವವರನ್ನು ಸಂಪರ್ಕ ಮಾಡಿ ಸರಕಾರದ ವತಿಯಿಂದ ಖರೀದಿ ಮಾಡುವ ಯೊಚನೆ ಮಾಡಿ. ಉತ್ತಮವಾಗಿ ಬಾಳಿ ಬದುಕಿದ್ದ ಎಷ್ಟೋ ಕುಟುಂಬಗಳು ಅತಿವೃಷ್ಟಿಯಿಂದಾಗಿ ಬದುಕಲು ನೆಲೆ ಇಲ್ಲದೆ ಬೀದಿಗೆ ಬಂದಿದ್ದಾರೆ. ಅವರ ಮನಸ್ಥಿತಿ ಅರಿತು ಆದಷ್ಟು ಬೇಗ ಕೆಲಸ ಮುಗಿಸುವಲ್ಲಿ ಗಮನಹರಿಸಿ. ಸರಕಾರದ ಮಟ್ಟದಲ್ಲಿ ಬೇಕಾದ ಸಹಾಯವನ್ನು ಕೊಡಿಸುವ ಕಾರ್ಯಗಳನ್ನು ನಾವು ಮಾಡುತ್ತೇವೆ. ಪರಿಹಾರ ಕಾರ್ಯಗಳು ನಿಧಾನವಾದರೆ ಸಂತ್ರಸ್ಥರು ಇನ್ನಷ್ಟು ಕಷ್ಟಕ್ಕೆ ಬೀಳಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಎಂಜಿ.ಎಂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಶ್ವತ್ ಬಾಬು ಅವರು ತಾಲ್ಲೂಕು ಅಸ್ಪತ್ರೆಗೆ ಹಲವು ಮೂಲಭೂತ ಸೌಕರ್ಯಗಳ ಕುರಿತು ಮನವಿ ಮಾಡುತ್ತಾ, ಪ್ರಸ್ತುತ ಆಸ್ಪತ್ರೆಯಲ್ಲಿ ಕೇವಲ 14 ಸಿಸಿ ಕ್ಯಾಮೆರಾಗಳು ಇದ್ದು ಇದು ಸಾಲುತ್ತಿಲ್ಲ. ಇನ್ನೂ 16 ಕ್ಯಾಮೆರಾಗಳು ಅವಶ್ಯವಿದ್ದು ಭದ್ರತಾ ದೃಷ್ಟಿಯಿಂದ ಕೂಡಲೇ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಇದರ ಜೊತೆಗೆ ಪಟ್ಟಣ ಪಂಚಾಯತಿ ವಿರುದ್ಧ ಆರೋಪ ಮಾಡಿದ ಅವರು ನಮ್ಮಲ್ಲಿ ಪ್ರತೀ ನಿತ್ಯ 25 ಕೆಜಿ ಗಳಷ್ಟು ವೇಸ್ಟೇಜ್ ಉತ್ಪತ್ತಿ ಆಗುತ್ತಿದೆ. ಬಯೋ ಮೆಡಿಕಲ್ ವೇಸ್ಟೇಜ್ ಹೊರತಾಗಿ ಇತರೆ ವೇಸ್ಟೇಜ್ ತ್ವರಿತವಾಗಿ ವಿಲೇವಾರಿ ಆಗುತ್ತಿಲ್ಲ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಕಸ ವಿಲೇವಾರಿ ವಿಷಯಕ್ಕೆ ಸಂಬಂಧಪಟ್ಟಂತೆ ತಾ.ಪಂ.ಅಧ್ಯಕ್ಷ ಕೆ.ಸಿ.ರತನ್ ಅವರು ಆಕ್ಷೇಪಣೆ ವ್ಯಕ್ತವಾಗಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳನ್ನು ಕರೆದು ಕಸ ವಿಲೇವಾರಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಸಹಿಸುವುದು ಅಸಾಧ್ಯ. ಅದರಲ್ಲೂ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚಮಾಡಿ ಸ್ವಚ್ಚತೆ ಬಗ್ಗೆ ಯೋಜನೆ ಜಾರಿಗೆ ತಂದಿದೆ. ಇದರ ಬಗ್ಗೆ ಕೂಡಲೇ ಗಮನ ಹರಿಸಬೇಕು ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಜೊತೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಮೂಡಿಗೆರೆ ಶಾಸಕರ ಮನವಿ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಳದಲ್ಲಿಯೇ ಅತಿವೃಷ್ಟಿಗೆ ಒಳಗಾಗಿರುವ 5 ಎಕರೆ ಒಳಗಿನ ಜಮೀನು ಹೊಂದಿರುವ ನಿರಾಶ್ರಿತರಿಗೆ ಪರಿಹಾರ ನೀಡಿ ಆದೇಶ ಹೊರಡಿಸಿರುವುದು ಸಂತಸ ತಂದಿದೆ. ಇದರಿಂದಾಗಿ ತಾಲ್ಲೂಕಿನ ಹಲವು ಕೃಷಿಕರಿಗೆ ಹೊಸ ಭರವಸೆ ಮೂಡಿದ್ದು ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ತಾ.ಪಂ.ಅಧ್ಯಕ್ಷ ಕೆ.ಸಿ. ರತನ್ ಅವರ ಮುಖ್ಯಸ್ಥಿಕೆಯಲ್ಲಿ ನಡೆದ ಸಭೆ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ತಾಲ್ಲೂಕಿನಾದ್ಯಂತ ರಸ್ತೆ, ಕುಡಿಯುವ ನೀರು, ಸ್ವಚ್ಚತೆ, ಆರೋಗ್ಯ, ವಿದ್ಯುತ್ ಸೇರಿದಂತೆ ಹಲಚು ವಿಚಾರಗಳ ಬಗ್ಗೆ ವಿಸ್ತøತವಾಗಿ ಚರ್ಚೆಗಳು ನಡೆದವು. ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು. ತಾ.ಪಂ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ವೆಂಕಟೇಶ್, ಜಿ.ಪಂ.ಸದಸ್ಯರುಗಳಾದ ಪ್ರಭಾಕರ್ ಗೌಡ, ಅಮಿತಾ ಮುತ್ತಪ್ಪ, ಸುಧಾ ಯೋಗೇಶ್, ತಾ.ಪಂ.ಉಪಾಧ್ಯಕ್ಷೆ ಪ್ರಮೀಳಾ ಸೇರಿದಂತೆ ಹಲವರು ಭಾಗವಹಿಸಿದ್ದರು.










