ಮೂಡಿಗೆರೆ : ನೆರೆ ಪೀಡಿತ ಪ್ರದೇಶದಲ್ಲಿ ನಡೆದ ಜೀಪ್ ರ್ಯಾಲಿಗೆ ಸ್ಥಳೀಯರ ಆಕ್ರೋಶ…

114
firstsuddi

ಕೊಟ್ಟಿಗೆಹಾರ : ನೆರೆ ಪೀಡಿತ ಪ್ರದೇಶದಲ್ಲಿ ಶನಿವಾರ ನಡೆದ ಜೀಪ್ ರ್ಯಾಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವರ್ಷ ನೆರೆಯಿಂದಾಗಿ ಹಾನಿಗೊಳಗಾದ ನೆರೆಪೀಡಿತ ಪ್ರದೇಶಗಳಾದ ದುರ್ಗದಹಳ್ಳಿ, ಮೈದಾಡಿ, ಮಧುಗುಂಡಿ, ಹಲಗಡಕ, ಗೌಡನಕೂಡಿಗೆ, ಬಲಿಗೆ, ತೋಟದಮನೆ ಸುತ್ತಮುತ್ತ ಶನಿವಾರ ಜೀಪ್ ರ್ಯಾಲಿ ನಡೆದಿದ್ದು ಮಂಗಳೂರು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಸಕಲೇಶಪುರ, ಮಡಿಕೇರಿ ಮೊದಲಾದ ಕಡೆಗಳಿಂದ 40 ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು.
ಶನಿವಾರ ಬೆಳಿಗ್ಗೆ ಮೈದಾಡಿಯಿಂದ ಜೀಪು ರ್ಯಾಲಿ ಪ್ರಾರಂಭವಾಗಿದ್ದು ಬಾಳೂರು ಪೋಲಿಸರು ದುರ್ಗದಹಳ್ಳಿ ಸಮೀಪ ಅಡ್ಡಗಟ್ಟಿದ ಪೋಲಿಸರು ಅನುಮತಿ ಇಲ್ಲದೆ ಇರುವುದರಿಂದ ರ್ಯಾಲಿ ನಡೆಸುವಂತಿಲ್ಲ ಎಂದು ಆಯೋಜಕರಿಗೆ ತರಾಟೆಗೆ ತೆಗೆದುಕೊಂಡರು.
ನಂತರ ಆಯೋಜಕರು ಪೋನ್ ಮೂಲಕ ಮೌಖಿಕ ಅನುಮತಿ ಪಡೆದಿದ್ದು ನಂತರ ಜೀಪ್ ರ್ಯಾಲಿಗೆ ಅವಕಾಶ ಕಲ್ಪಿಸಲಾಯಿತು. ರ್ಯಾಲಿಗೆ ಅವಕಾಶ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ನೆರೆಪೀಡಿತ ಪ್ರದೇಶದಲ್ಲಿ ಜನರು ಮತ್ತೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ರ್ಯಾಲಿ ನಡೆಸಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಯಾವ ಕಾರ್ಯಕ್ರಮ ಮಾಡಬೇಕಾದರೂ ಒಂದು ವಾರ ಮೊದಲು ಸಂಬಂಧಿಸಿದವರ ಅನುಮತಿ ಪಡೆಯಬೇಕು. ಆದರೆ ರ್ಯಾಲಿ ನಡೆಸುವ ಮೊದಲು ಅನುಮತಿ ಪಡೆಯದೆ ಪೋಲಿಸರು ಪ್ರಶ್ನಿಸಿದ ನಂತರ ಆಯೋಜಕರು ಪೋನ್ ಮೂಲಕ ಮೇಲಾಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ. ಪೋನ್ ಮೂಲಕ ಅಧಿಕಾರಿಗಳು ಅನುಮತಿ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರ್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಜೀಪ್ ಬೆಳ್ತಂಗಡಿ ಬಳಿ ಅಪಘಾತ

ಬೆಳ್ತಂಗಡಿ ಸಮೀಪದ ಕುವೆಟ್ಟು ಬಳಿ ಮಂಗಳೂರು ಚಿಕ್ಕಮಗಳೂರು ಹೆದ್ದಾರಿಯಲ್ಲಿ ಜೀಪ್ ರ್ಯಾಲಿಯಲ್ಲಿ ಭಾಗವಹಿಸಿ ಮಂಗಳೂರಿಗೆ ತೆರಳುತ್ತಿದ್ದ ಜೀಪ್ ಹಾಗೂ ಬೊಲೆರೊ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಜೀಪು ನಜ್ಜುಗುಜ್ಜಾಗಿದೆ. ಪ್ರಯಾಣೀಕರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.