ಮೂಡಿಗೆರೆ : ಪರಿಸರ ಸಂರಕ್ಷಣೆ ಮಾನವ ಕುಲದ ಮೊದಲ ಆದ್ಯತೆಯಾಗಬೇಕಿದೆ : ಹಿರಿಯ ವಿಜ್ಞಾನಿ ಭರತ್.

197
firstsuddi

ಮೂಡಿಗೆರೆ : ದಿನದಿಂದ ದಿನಕ್ಕೆ ಅಭಿವೃದ್ದಿಯ ನೆಪದಲ್ಲಿ ಅರಣ್ಯ ಪ್ರದೇಶ ಕ್ಷೀಣಿಸುತ್ತಾ ಬರುತ್ತಿದ್ದು ಇದರಿಂದ ಹವಾಮಾನ ಅಸಮತೋಲನ ಹೆಚ್ಚಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಭರತ್ ಹೇಳಿದರು.
ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಯಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕೃಷಿ ವಿಸ್ತರಣಾ ನಿರ್ದೇಶಾನಾಲಯ, ಕೃಷಿವಿಜ್ಞಾನ ಕೇಂದ್ರ, ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಅರಣ್ಯ ಇಲಾಖೆಯ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳೆಲ್ಲ ಪರಿಸರ ಸಂರಕ್ಷಣೆಯ ಮಹತ್ವವನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ದಿನಾಚರಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಪರಿಸರ ಸಂರಕ್ಷಣೆ ಮಾನವ ಕುಲದ ಮೊದಲ ಆದ್ಯತೆಯಾಗಬೇಕಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಣೆ ಮಾಡುವ ಅಗತ್ಯವಿದೆ. ಅರಣ್ಯ ಬರಿದಾಗುತ್ತಿದೆ. ಇದರಿಂದ ಪರಿಸರದಲ್ಲಿ ಏರಿಳಿತ ಉಂಟಾಗುತ್ತಿದೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್, ಭಾರತ ದೇಶದ ಪರಿಸರವು ಉತ್ತಮವಾಗಿದ್ದು ಇಲ್ಲಿ ನೆಮ್ಮದಿಯ ಬದುಕು ಸಾಗಿಸಲು ಅನುಕೂಲಕರವಾದ ವಾತಾವರಣವಿದೆ. ಆಧುನೀಕರಣದ ಹೆಸರಿನಲ್ಲಿ ಅಬಿವೃದ್ದಿ ಕಾರ್ಯಗಳನ್ನು ನಡೆಸಲಾಗುತ್ತಿದ್ದು ಇದರಿಂದಾಗಿ ಪರಿಸರ ತನ್ನ ಮೂಲ ಸ್ವರೂಪವವನ್ನು ಕಳೆದುಕೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪರಿಸರದ ಬಗೆಗಿನ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲೆ ಶಿಲ್ಪ ಶೆಣೈ, ಅರಣ್ಯ ಸಿಬ್ಬಂದಿ ವಿಜಯಕುಮಾರ್, ಪೂರ್ಣೇಶ್, ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.